Advertisement

ವೃದ್ಧರ ದರೋಡೆ ಮಾಡುತ್ತಿದ್ದ ಮೂವರ ಬಂಧನ

03:20 PM Aug 05, 2018 | Team Udayavani |

ಬೆಂಗಳೂರು: ವೃದ್ಧರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರನ್ನು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರದ ಗಂಗಾನಗರ ನಿವಾಸಿಗಳಾದ ಆಸೀಫ್ ಖಾನ್‌ (35), ಮೆಹಬೂಬ್‌ ಪಾಷಾ (29) ಮತ್ತು ಅಲ್ತಾಫ್ ಮೊಹಮ್ಮದ್‌ ಸುಹೇಲ್‌ (36) ಬಂಧಿತರು.

Advertisement

ಆರೋಪಿಗಳಿಂದ 33.10 ಲಕ್ಷ ರೂ. ಮೌಲ್ಯದ 1 ಕೆ.ಜಿ. 88 ಗ್ರಾಂ ಚಿನ್ನಾಭರಣ ಹಾಗೂ 45 ಸಾವಿರ ರೂ. ನಗದು, 2 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಲಯ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ಮಾದರಿಯಲ್ಲಿ ದರೋಡೆ: ಮೆಜೆಸ್ಟಿಕ್‌ನ ಫ‌ುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುವ ಆಸೀಫ್ ಖಾನ್‌, ಕಾರಿನಲ್ಲಿ ಒಬ್ಬರೇ ಹೋಗುವ ವೃದ್ಧರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಅವರು ಕಾರು ನಿಲ್ಲಿಸುವಾಗ ಕಾರಿನ ಬಾಗಿಲು ತೆರೆಯದಂತೆ ಬೈಕ್‌ ಡ್ಡ ನಿಲ್ಲಿಸುತ್ತಿದ್ದ. ನಂತರ ಕಾರಿನ ಕೀ ಕಸಿದು, ಕೊಲ್ಲುವುದಾಗಿ ಬೆದರಿಸಿ ಹಣ ಮತ್ತು ಒಡವೆ ದರೋಡೆ ಮಾಡುತ್ತಿದ್ದ.

ಕೊಲೆವೊಮ್ಮೆ ವೃದ್ಧರ ಕಾರು ತಡೆಯುತ್ತಿದ್ದ ಆರೋಪಿ, ತನ್ನ ಕಾಲಿನ ಮೇಲೆ ಕಾರು ಹತ್ತಿಸಿದ್ದೀರ ಎಂದು ಜಗಳ ತೆಗೆಯುತ್ತಿದ್ದ. ಬಳಿಕ ತಾನು ಸೂಚಿಸಿದ ಆಸ್ಪತ್ರೆಗೆ ಕರೆದೊಯ್ಯಲು ಪಟ್ಟು ಹಿಡಿದು ಕಾರು ನಿರ್ಜನ ಪ್ರದೇಶಕ್ಕೆ ಹೋಗುತ್ತಿದ್ದಂತೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ. ಈತ ಹೀಗೆ 28 ದರೋಡೆ ಮಾಡಿದ್ದಾನೆ ಎಂದು ಅವರು ತಿಳಿಸಿದರು.

ಬಂಧನ ಹೇಗೆ?: 2010ರಲ್ಲಿ ಆಸೀಫ್ ಖಾನ್‌ ಕಬ್ಬನ್‌ ಪಾರ್ಕ್‌ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಎಸಗಿ ಬಂಧನಕ್ಕೊಳಗಾಗಿದ್ದ. ಬಳಿಕ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಈ ಮಧ್ಯೆ ಒಂದೂವರೆ ವರ್ಷದಿಂದ ಆರೋಪಿ ಮತ್ತೆ ದರೋಡೆ ಆರಂಭಿಸಿದ್ದ.

Advertisement

ಕೆಲ ತಿಂಗಳ ಹಿಂದೆಷ್ಟೇ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ರಾಬರಿ ಮಾಡಿದ್ದ ಆರೋಪಿ, ಮನೆ ಮಾಲೀಕರ ಮೊಬೈಲ್‌ ನಂಬರ್‌ ಪಡೆದು ನಾಪತ್ತೆಯಾಗಿದ್ದ. ಬಳಿಕ ಮಹಿಳೆಯೊಬ್ಬರಿಂದ ಕದ್ದ ಮೊಬೈಲ್‌ನಲ್ಲಿ ರಾಬರಿಗೊಳಗಾದ ಮನೆ ಮಾಲೀಕರಿಗೆ ಕರೆ ಮಾಡಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

ಇದೇ ವೇಳೆ ಪ್ರಕರಣ ಒಂದರ ತನಿಖೆ ನಡೆಸುತ್ತಿದ್ದ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಆರೋಪಿಯ ಈ ಕೃತ್ಯದ ಮಾದರಿ ಪಡೆದು ಈತ ಕರೆ ಮಾಡಿದ ಮೊಬೈಲ್‌ ನೆಟವರ್ಕ್‌ ಪರಿಶೀಲಿಸಿದಾಗ ಅಶೋಕನಗರದ ಲಾಲ್‌ಜಿನಗರದಲ್ಲಿ ಪತ್ತೆಯಾಗಿತ್ತು. ಬಳಿಕ ಆರೋಪಿಯ ಮನೆ ಪತ್ತೆ ಹಚ್ಚಿ ಬಂಧಿಸಲಾಗಿದೆ. ದರೋಡೆಯಿಂದ ಬಂದ ಹಣವನ್ನು ಆಸೀಫ್ ಲೈವ್‌ಬ್ಯಾಂಡ್‌ಗೆ ಸುರಿಯುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಚಿನ್ನಾಭರಣಗಳಲ್ಲಿ ನನ್ನ ಭಾವನೆ ಅಡಗಿದೆ: “ವರ್ಷದ ಹಿಂದೆ ಜಯನಗರದ 4ನೇ ಹಂತದ ನಮ್ಮ ಅಂಗಡಿ ಎದುರು ಕಾರು ನಿಲ್ಲಿಸುವಾಗ ಬೈಕ್‌ನಲ್ಲಿ ಬಂದ ಆರೋಪಿ ಆಸೀಫ್, ಅನಗತ್ಯ ವಿಚಾರಕ್ಕೆ ಜಗಳ ತೆಗೆದು 1 ಚಿನ್ನದ ಸರ ಮತ್ತು ಎರಡು ಉಂಗುರುಗಳನ್ನು ದರೋಡೆ ಮಾಡಿದ್ದ.

ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ, ಅವು ವಾಪಸ್‌ ಸಿಗುವ ನಂಬಿಕೆ ಇರಲಿಲ್ಲ. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರಿಗೆ ಧನ್ಯವಾದಗಳು. ಈ ಸರ ಮತ್ತು ಉಂಗುರಗಳು 1972ರಲ್ಲಿ ನನ್ನ ಮದುವೆ ವೇಳೆ ನನ್ನ ಮಾವ ಕೊಟ್ಟಿದ್ದು. ಹೀಗಾಗಿ ಇವುಗಳಲ್ಲಿ ನನ್ನ ಭಾವನೆ ಅಡಗಿದೆ’ ಎಂದು ಪೊಲೀಸರಿಂದ ಆಭರಣಗಳನ್ನು ಪಡೆಯುವಾಗ ದೂರುದಾರ ಪಾಂಡ ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next