ಚಿತ್ರದುರ್ಗ: ಕೇವಲ ಮೂರು ದಿನಗಳ ಅಂತರದಲ್ಲಿ ಸಹೋದರರಿಬ್ಬರು ಸೇರಿದಂತೆ ಒಟ್ಟೂ ಮೂವರು ನಕಲಿ ಮದ್ಯ ಸೇವಿಸಿ ಬಲಿಯಾಗಿದ್ದಾರೆ. ಶುಕ್ರವಾರ ಓರ್ವ ಮೃತಪಟ್ಟ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ರಾಜ್ಯದಲ್ಲಿ ಇನ್ನೂ ನಕಲಿ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿರುವುದು ಸಾಬೀತಾಗಿದೆ.
ತಾಲೂಕಿನ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಮಾನಂಗಿ ಸಮೀಪದ ಕಳ್ಳಿಹಟ್ಟಿ ಗ್ರಾಮದ ನಿವಾಸಿಗಳಾದ ಪರಶುರಾಮಪ್ಪ (55) ಹಾಗೂ ವೆಂಕಟಪ್ಪ (60) ಚಾಟಿ ತಿಮ್ಮಪ್ಪ (65) ಅಕ್ರಮ ಮದ್ಯ ಸೇವಿಸಿ ಅಸುನೀಗಿದವರು.
ಕಳೆದ ಅ.17 ಮಂಗಳವಾರದಂದು ಪರಶುರಾಮಪ್ಪ ಮೃತಪಟ್ಟಿದ್ದರೆ, ಕೇವಲ ಮೂರು ದಿನಗಳ ಅಂತರದಲ್ಲಿ ಈತನ ಸಹೋದರ ವೆಂಕಟಪ್ಪ ಸಹ ಮದ್ಯ ಸೇವಿಸಿ ಸಾವು ಕಂಡಿದ್ದಾರೆ. ಇದಲ್ಲದೆ ಇದೇ ತಿಂಗಳ 10ರಂದು ಮತ್ತೂಬ್ಬ ವ್ಯಕ್ತಿ ಮೃತಪಟ್ಟಿದ್ದ. ಗ್ರಾಮದಲ್ಲಿ ನಕಲಿ ಮದ್ಯದ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಮೂವರ ಸಾವಿನ ನಂತರ ಗ್ರಾಮಸ್ಥರ ಆಕ್ರೋಶ ಕಟ್ಟೆ ಒಡೆದಿದೆ. ಮೃತರ ಕುಟುಂಬದವರು ಹಾಗೂ ಗ್ರಾಮಸ್ಥರು ಮೃತ ದೇಹವನ್ನು ಅಬಕಾರಿ ಇಲಾಖೆಗೆ ಕೊಂಡೊಯ್ದು ನಕಲಿ ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ನಡೆಯುತ್ತಿರುವ ನಕಲಿ ಮದ್ಯ ಮಾರಾಟ ತಡೆಯುವಂತೆ ಅಬಕಾರಿ, ಪೊಲೀಸ್ ಅ ಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸುಮಾರು 500 ಕುಟುಂಬಗಳಿರುವ ಕಳ್ಳಿಹಟ್ಟಿಯಲ್ಲಿ 50-60 ಅಂಗಡಿ ಮತ್ತು ಮನೆಗಳಲ್ಲಿ ನಿರಂತರವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ ಎನ್ನಲಾಗಿದೆ. ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಮತ್ತು ಅಕ್ರಮ ಮದ್ಯ ಮಾರಾಟ ಬಗ್ಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ಮಾಡಲಾಗಿದೆ. ಆದರೂ ನಕಲಿ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೃತರ ಕುಟುಂಬ ಆಕ್ರೋಶ
ನಕಲಿ ಮದ್ಯ ಸೇವನೆಯಿಂದ ತಂದೆಯರನ್ನು ಕಳೆದುಕೊಂಡ ಕಳ್ಳಿಹಟ್ಟಿಯ ಮೃತ ವೆಂಕಟಪ್ಪನ ಪುತ್ರಿ ಪ್ರೇಮ, ಮೃತ ಪರಶುರಾಮಪ್ಪನ ಪುತ್ರಿ ಮೀನಾಕ್ಷಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಧಿಕಾರಿಗಳ ಎದುರಿಗೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಸರಬರಾಜಾಗುತ್ತಿರುವ ಮದ್ಯ ನಕಲಿಯಾಗಿದ್ದು, ಸ್ಥಳೀಯವಾಗಿ ತಯಾರಿಸುವ ಮದ್ಯವನ್ನು ಏಜೆಂಟರಿಬ್ಬರು ಗ್ರಾಮದ ಕಿರಾಣಿ ಅಂಗಡಿಗಳಿಗೆ ತಲುಪಿಸುತ್ತಾರೆ. ಹೀಗಾಗಿ ಗ್ರಾಮದಲ್ಲೇ ಕಡಿಮೆ ದರಕ್ಕೆ ಸಿಗುವ ಮದ್ಯದ ಚಟಕ್ಕೆ ಯುವಕರು, ವೃದ್ಧರು ಹಗಲೂ ರಾತ್ರಿ ಕುಡಿದು ತೂರಾಡುತ್ತಾ, ಶಾಲೆಗೆ ಹೋಗುವ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.
ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಿರಾಣಿ ಅಂಗಡಿ, ಮಾಂಸಾಹಾರಿ ಹೋಟೆಲ್‌ಗಳಲ್ಲಿ, ಡಾಬಾಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸಂಬಂಧಪಟ್ಟವರು ಗಮನ ಹರಿಸದೆ, ಸೇಲ್ ಟಾರ್ಗೆಟ್ ಹೆಚ್ಚು ಮಾಡಬೇಕು ಎಂಬ ಸರ್ಕಾರದ ಅಲಿಖೀತ ನಿಯಮ ಪಾಲಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
– ಆನಂದ್. ಗ್ರಾಮದ ಯುವಕ