Advertisement

ಮೂವರಿಗೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

10:40 AM Aug 26, 2018 | |

ಬೆಂಗಳೂರು: ವಿಶಿಷ್ಟ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಶನಿವಾರ ಪ್ರಕಟಗೊಂಡಿದ್ದು, ಕರ್ನಾಟಕದ ಮೂವರು ಸೇರಿ 45 ಶಿಕ್ಷಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

Advertisement

ಎಲ್ಲ ರಾಜ್ಯಗಳಿಂದ ತಲಾ ಆರು ಶಿಕ್ಷಕರಂತೆ ಒಟ್ಟು 155 ಶಿಕ್ಷಕರ ಹೆಸರನ್ನು ರಾಷ್ಟ್ರೀಯ ಪ್ರಶಸ್ತಿಗಾಗಿ ಕಳುಹಿಸಲಾಗಿತ್ತು. ಅಂತಿಮವಾಗಿ ಅದರಲ್ಲಿ 45 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಅತಿ ಹೆಚ್ಚು ಮೂರು ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಅದೇ ರೀತಿ ತೆಲಂಗಾಣ ಮತ್ತು ಸಿಕ್ಕಿಂ ಕೂಡ ತಲಾ ಮೂರು ಪ್ರಶಸ್ತಿಗಳಿಗೆ ಭಾಜನವಾಗಿದೆ. 

ರಾಜ್ಯದಿಂದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಚಿ. ಮಂಗಲದ ಡಾ.ಎಂ. ಶಿವಕುಮಾರ್‌, ದೇವನಹಳ್ಳಿಯ ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಡಾ.ಜಿ.ರಮೇಶಪ್ಪ, ಬೆಂಗಳೂರು ಉತ್ತರದ ಉಪನಿರ್ದೇಶಕರ ಕಚೇರಿಯಲ್ಲಿ ವಿಜ್ಞಾನ ವಿಷಯ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್‌.ಎನ್‌. ಶೈಲಾ ಅವರು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ಪ್ರಶಸ್ತಿಯು ಬೆಳ್ಳಿ ಪದಕ ಮತ್ತು 50 ಸಾವಿರ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದ್ದು, ಶಿಕ್ಷಕರ ದಿನಾಚರಣೆಯಂದು ಅಂದರೆ ಸೆಪ್ಟೆಂಬರ್‌ 5ರಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಮೂವರೂ ಶಿಕ್ಷಕರು ತಮ್ಮದೇ ವಿಷಯಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಮೂವರೂ ಶಿಕ್ಷಕರು ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದರು. ಪ್ರಶಸ್ತಿ ನಿರೀಕ್ಷಿತವಾಗಿತ್ತು. ನಮ್ಮ ಸಾಧನೆಗೆ ಸಂದ ಗೌರವ ಇದಾಗಿದ್ದು, ಈ ಪ್ರಶಸ್ತಿಯಿಂದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿದಂತಾಗಿದೆ. ಇನ್ನಷ್ಟು ಆಸಕ್ತಿಯಿಂದ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ಶಿಕ್ಷಕರು ಖುಷಿ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next