Advertisement

ಉಡುಪಿ ಜಿಲ್ಲೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ; 5,968 ಮಾದರಿ ವರದಿ ನಿರೀಕ್ಷೆಯಲ್ಲಿ

06:35 AM May 27, 2020 | Hari Prasad |

ಉಡುಪಿ: ಜಿಲ್ಲೆಯ ನಾಗರಿಕರನ್ನು ಕಳೆದ ಎರಡು ದಿನ ನಿದ್ದೆಗೆಡಿಸಿದ್ದ ಕೋವಿಡ್ ಸೋಂಕು ಮಂಗಳವಾರ ಸ್ವಲ್ಪ ನಿಧಾನವಾಗಿದೆ.

Advertisement

ಮಂಗಳವಾರ ಮೂರು ಪ್ರಕರಣಗಳು ಮಾತ್ರ ದಾಖಲಾಗಿದ್ದು ಒಟ್ಟು ಪ್ರಕರಣ 111ಕ್ಕೇರಿದೆ.

ಸೋಂಕಿತ ಮೂವರೂ ಮಹಾರಾಷ್ಟ್ರ ಮೂಲದಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರು. ಇವರಲ್ಲಿ 21 ವರ್ಷದ ಪುರುಷ, 30 ವರ್ಷದ ಮಹಿಳೆ, ಒಂಭತ್ತು ವರ್ಷದ ಬಾಲಕಿ ಇದ್ದಾರೆ.

ಮತ್ತೆ ಮಾದರಿ ಪರೀಕ್ಷೆ
ಪ್ರವಾಸ ಹಿನ್ನೆಲೆ ಇರದ ಕಾರ್ಕಳದ ಗರ್ಭಿಣಿ ಮತ್ತು ಉಡುಪಿ ಜಿ.ಪಂ. ಸಿಬಂದಿಯ ಗಂಟಲ ದ್ರವವನ್ನು ಮತ್ತೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಮತ್ತೆ ಪರೀಕ್ಷೆಗೆ ಕಳುಹಿಸಿದ ಕಾರಣ ಅವರಿಬ್ಬರು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ.

ಎಸ್‌ಪಿ, ಜಿ.ಪಂ. ಕಚೇರಿ ಸ್ಯಾನಿಟೈಸ್‌
ಸೋಮವಾರ ಸೋಂಕು ಕಂಡು ಬಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬಂದಿ ಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಕಾರಣ ಎಸ್‌ಪಿ ಕಚೇರಿ ಮತ್ತು ಇತರ ಸೋಂಕಿತರ ಸಂಪರ್ಕವಿದ್ದ ಪೊಲೀಸ್‌ ಠಾಣೆಗಳನ್ನು ಮಂಗಳವಾರ ಸ್ಯಾನಿಟೈಸ್‌ ಮಾಡಲಾಯಿತು. ಜಿ.ಪಂ. ಸಿಬಂದಿಗೆ ಸೋಂಕು ಕಂಡುಬಂದ ಕಾರಣ ಜಿ.ಪಂ. ಕಚೇರಿಯನ್ನೂ ಸ್ಯಾನಿಟೈಸ್‌ ಮಾಡಲಾಯಿತು.

Advertisement

1,581 ಮಾದರಿ ಸಂಗ್ರಹ
ಮಂಗಳವಾರ 1,581 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವರಲ್ಲಿ ಒಬ್ಬರು ಉಸಿರಾಟದ ಸಮಸ್ಯೆಯವರು, 66 ಮಂದಿ ಕೋವಿಡ್ ಸಂಪರ್ಕಿತರು, ಮೂವರು ಜ್ವರ ಬಾಧಿತರು, 1,511 ಮಂದಿ ಹಾಟ್‌ ಸ್ಪಾಟ್‌ ಸಂಪರ್ಕದವರಾಗಿದ್ದಾರೆ. ಮಂಗಳವಾರ 150 ನೆಗೆಟಿವ್‌ ಪ್ರಕರಣಗಳು ವರದಿಯಾದರೆ, ಮೂರು ಪಾಸಿಟಿವ್‌ ಪ್ರಕರಣಗಳಾಗಿವೆ. 5,968 ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ನಿರೀಕ್ಷಿತ ಭೀತಿ
ಬಾಕಿ ಇರುವ ಮಾದರಿಗಳ ವರದಿ ಬರುವಾಗ ಏನಾಗಬಹುದು ಎಂಬ ಭೀತಿ ಇದ್ದೇ ಇದೆ. ಇನ್ನೊಂದು ಕಡೆ ಮಹಾರಾಷ್ಟ್ರದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಸುಮಾರು 8,000 ಜನರ ಗಂಟಲು ದ್ರವ ಮಾದರಿಗಳನ್ನು ಆರೋಗ್ಯ ಸೇನಾನಿಗಳು ಸಂಗ್ರಹಿಸುತ್ತಲೇ ಇದ್ದಾರೆ. ವರದಿಗಳು ಬಂದ ಬಳಿಕವೇ ಮನೆ ಕ್ವಾರಂಟೈನ್‌ಗೆ ಬಿಡುಗಡೆ ಮಾಡುತ್ತಾರೆ.

ಮುಂಜಾಗ್ರತೆ ಅಗತ್ಯ
ಆರೋಗ್ಯ ಸೇನಾನಿಗಳೂ ಸೇರಿದಂತೆ ಪ್ರವಾಸ ಹಿನ್ನೆಲೆ ಇರದವರಿಗೂ ಸೋಂಕು ತಗಲಿರುವುದು ಸ್ಥಳೀಯರು ವಹಿಸಬೇಕಾದ ಮುಂಜಾಗ್ರತೆ ಅಗತ್ಯದ ತೀಕ್ಷ್ಣತೆಯನ್ನು ಸಾರುತ್ತಿದೆ.

ಆಸ್ಪತ್ರೆಯಲ್ಲಿ 105 ಮಂದಿ
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ದಾಖಲಾದ ಮೂರು ಪ್ರಕರಣಗಳಲ್ಲಿ ಇಬ್ಬರು ಉಡುಪಿ ತಾಲೂಕು ಮತ್ತು ಓರ್ವರು ಕಾರ್ಕಳ ತಾಲೂಕಿನವರಾಗಿದ್ದಾರೆ. ಈ ಮೂವರಿಗೆ ಪ್ರಾಥಮಿಕ ಸಂಪರ್ಕವಿದ್ದ 29 ಮಂದಿಯನ್ನು ಕ್ವಾರೆಂಟೈನ್‌ ಮಾಡಲಾಗಿದೆ.

ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ 105 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ದಾಖಲಾದ 32 ಪ್ರಕರಣಗಳಲ್ಲಿ 14 ಮಂದಿ ಉಡುಪಿ ತಾಲೂಕು, 9 ಮಂದಿ ಕುಂದಾಪುರ ತಾಲೂಕು, 5 ಮಂದಿ ಬೈಂದೂರು ತಾಲೂಕು ಮತ್ತು 4 ಮಂದಿ ಕಾರ್ಕಳ ತಾಲೂಕಿನವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next