ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮೊದಲ ಬಲಿಯಾಗಿದೆ.
ಅಜ್ಜಂಪುರ ಮೂಲದ 70 ವರ್ಷದ ಮಹಿಳೆ ಕೋವಿಡ್ 19 ಸೋಂಕಿನ ಕಾರಣದಿಂದ ಇಂದು ಮೃತಪಟ್ಟಿದ್ದಾರೆ.
ಉಸಿರಾಟದ ತೊಂದರೆಯ ಕಾರಣ ಕಳೆದ ಕೆಲವು ದಿನಗಳಿಂದ ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಈ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ಗುರುವಾರದಂದು ಮೂರು ಹೊಸ ಕೋವಿಡ್ 19 ಸೋಂಕಿನ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ವ್ಯಕ್ತಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯಾಗಿದ್ದಾರೆ.
ತರೀಕೆರೆ ಮೂಲದ ಇಬ್ಬರು ಹಾಗೂ ಕೊಪ್ಪದ ಓರ್ವ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು ಇವರನ್ನು ಚಿಕ್ಕ ಮಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ಇವರಲ್ಲಿ 17 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು ಇನ್ನೂ 7 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.