ಅಂದು ಅಮ್ಮನ ಜೊತೆ ಮುಂಬೈಗೆ ಹೊರಟಿದ್ದೆ. ಕುಡಚಿ ರೈಲು ನಿಲ್ದಾಣದಲ್ಲಿ ನಿಂತು ಸಹ್ಯಾದ್ರಿ ಎಕ್ಸ್‌ಪ್ರೆಸ್‌ಗೆ ಕಾಯುತ್ತಿದ್ದೆವು. ಸಮಯ 8 ಗಂಟೆ. ಅಮ್ಮ ಮಣಭಾರದ ಬ್ಯಾಗ್‌ಗಳನ್ನು ತಂದಿದ್ದರು.ನನಗೆ ಚಿಂತೆ… “ಹೇಗಪ್ಪಾ, ಈ ಲಗ್ಗೇಜುಗಳನ್ನು ರೈಲಿನಲ್ಲಿ ಎತ್ತಿ ಇಡೋದು?’ ಅಂತ. ಅಷ್ಟರಲ್ಲೇ ನಮ್ಮ ಪಕ್ಕದಲ್ಲಿ ಒಬ್ಬ ಹುಡುಗ ಬಂದು ನಿಂತಿದ್ದ. ಅವನನ್ನು ನೋಡಿ ಸ್ವಲ್ಪ ಭಯವಾಯಿತು. ಅಮ್ಮ ನೋಡ ನೋಡುತ್ತಲೇ ಆ ವ್ಯಕ್ತಿಯನ್ನು ಪರಿಚಯಮಾಡಿಕೊಂಡರು.
ಇನ್ನೇನು ರೈಲು ಬರಲು ಕೆಲವು ನಿಮಿಷಗಳು ಬಾಕಿ. ಆ ವ್ಯಕ್ತಿಗೆ ನಮ್ಮ ಲಗ್ಗೇಜುಗಳನ್ನು ರೈಲಿನಲ್ಲಿ ಇಡುವಂತೆ ಅಮ್ಮ ವಿನಂತಿಸಿಕೊಂಡರು. ನನಗೆ ಆತಂಕ… ಆತ ನಮ್ಮ ಲಗ್ಗೇಜ್‌ಗಳನ್ನು ತೆಗೆದುಕೊಂಡು ಪರಾರಿ ಆಗಿಬಿಟ್ಟರೆ ಅಂತ. ಅಮ್ಮನಿಗೆ ಬೈದೆ… “ಯಾಕೆ ಅಪಚಿತರನ್ನು ಅಷ್ಟು ಬೇಗ ನಂಬಿಬಿಡ್ತೀಯಾ? ಹಾಗೆ ನಂಬಬಾರದು’ ಎಂದೆ. ನಾನು ಹಾಗೆ ಅನುಮಾನದಿಂದ ನೋಡಿದ್ದು, ಆತನಿಗೆ ಕೊಂಚ ಕಸಿವಿಸಿಯೂ ಆಯಿತು.
ಟ್ರೈನ್ ಬಂತು. ತುಂಬಾ ರಶ್ ಇದ್ದ ಕಾರಣ, ನನಗೆ ಸೀಟೇ ಸಿಕ್ಕಿರಲಿಲ್ಲ. ಸುತ್ತಮುತ್ತಲೆಲ್ಲ ಹುಡುಗರೇ ಇದ್ದರು. ನನ್ನ ಸಂಕಷ್ಟ ನೋಡಿ, ಲಗ್ಗೇಜ್ ಎತ್ತಿಕೊಟ್ಟ ವ್ಯಕ್ತಿ ನನಗೆ ಸೀಟು ಬಿಟ್ಟುಕೊಟ್ಟ. ನನಗೆ ಆಗ ತಲೆ ತಗ್ಗಿಸುವಂತಾಯಿತು. ನಮ್ಮ ಸ್ಟಾಪ್ ಬಂದಾಗ, ಆತನೇ ಲಗ್ಗೇಜ್ ಇಳಿಸಿ, ಒಂದು ನಗು ಬೀರಿದ. ನಿಜಕ್ಕೂ ಆತ ಅವತ್ತು ನಮ್ಮ ಪಾಲಿಗೆ ಆಪದಾºಂಧವನಾಗಿದ್ದ.
ಎಲ್ಲರನ್ನೂ ಅನುಮಾನದ ತಕ್ಕಡಿಯಲ್ಲಿ ತೂಗಬಾರದು ಅಂತ ನನಗೆ ಆಗ ಅನ್ನಿಸಿತು.
ಪಲ್ಲವಿ ಸಂಜೀವ, ವಿಜಯಪುರ