ಢಾಕಾ : ಬಂದರು ನಗರವಾಗಿರುವ ಚಿತ್ತಗಾಂಗ್‌ನಲ್ಲಿ ಪೊಲೀಸರು ಶೋಧ ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆಯೇ ತಮ್ಮ ಅಡಗುದಾಣದಲ್ಲಿ ಅವಿತುಕೊಂಡಿದ್ದ ಮೂವರು ಇಸ್ಲಾಮಿಕ್ ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಕೌಂಟರ್ ಟೆರರಿಸಂ ಆ್ಯಂಡ್ ಟ್ರಾನ್ಸ್‌ನ್ಯಾಶನಲ್ ಕ್ರೈಮ್ ಯುನಿಟ್, ಸ್ಪೆಶಲ್ ವೆಪನ್ ಆ್ಯಂಡ್ ಟ್ಯಾಕ್‌ಟಿಕ್ ಟೀಮ್ (ಸ್ವಾéಟ್), ರಾಪಿಡ್ ಆ್ಯಕ್ಷನ್ ಬೆಟಾಲಿಯನ್ ಮತ್ತು ಚಿತ್ತಗಾಂಗ್ ಜಿಲ್ಲಾ ಪೊಲೀಸ್ ದಳ ಸೇರಿಕೊಂಡು ಸೀತಾಕುಂಡ ಎಂಬಲ್ಲಿ “ಅಸಾಲ್ಟ್ 16′ ನಾಮಾಂಕಿತ ಈ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಜಂಟಿಯಾಗಿ ನಡೆಸಿದ್ದವು.
ಎರಡು ಮಹಡಿಗಳ ಕಟ್ಟಡದಲ್ಲಿ ಇಸ್ಲಾಮಿಕ್ ಉಗ್ರರು ಬಾಡಿಗೆದಾರರಾಗಿ ವಾಸವಾಗಿದ್ದರು. ತಾವು ಅವಿತುಕೊಂಡಿದ್ದ ಈ ಕಟ್ಟಡಕ್ಕೆ ಪೊಲೀಸರು ನುಗ್ಗಿ ಬರುತ್ತಿದ್ದಾರೆ ಎಂಬುದನ್ನು ಮುಂಚಿತವಾಗಿ ಅರಿತುಕೊಂಡ ಉಗ್ರರು ಮೊದಲಾಗಿ ಪೊಲೀಸರ ಮೇಲೆ ಗುಂಡು ಹಾರಿಸಿದರು. ಅನಂತರ ತಮ್ಮನ್ನು ತಾವೇ ಸ್ಫೋಟಿಸಿಕೊಂಡರು. ಪರಿಣಾಮವಾಗಿ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದ ಇಬ್ಬರು ಪೊಲೀಸರು ಗಾಯಗೊಂಡರು.
ಈ ಮೂವರು ಉಗ್ರರು ನಿಷೇಧಿತ ನಿಯೋ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಗೆ ಸೇರಿದವರೆಂದು ಗೊತ್ತಾಗಿದೆ.
ಉಗ್ರರು ತಾವು ಅಡಗಿಕೊಂಡಿದ್ದ ಈ ಕಟ್ಟಡದಲ್ಲಿ ವಾಸವಾಗಿ ಹಲವು ಕುಟುಂಬಗಳ ಜನರನ್ನು ಹಿಂದಿನ ರಾತ್ರಿ ಪೂರ್ತಿ ತಮ್ಮ ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದರು. ಪೊಲೀಸ್ ಕಾಯಾರಚರಣೆಗೆ 10 ನಿಮಿಷ ಮುನ್ನ ಅವರನ್ನು ಉಗ್ರರು ಬಿಡುಗಡೆ ಮಾಡಿದ್ದರು.