Advertisement

ಹಿಜಾಬ್‌ವಿಚಾರಣೆಗೆ ತ್ರಿಸದಸ್ಯ ಪೀಠ: ಸುಪ್ರೀಂ ಕೋರ್ಟ್‌

12:17 AM Jan 24, 2023 | Team Udayavani |

ಹೊಸದಿಲ್ಲಿ: ಕರ್ನಾಟಕದ ಹಿಜಾಬ್‌ ವಿವಾದ ಸಂಬಂಧ ತ್ರಿಸದಸ್ಯ ಪೀಠದಿಂದ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಕಳೆದ ಅ. 13ರಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನ ತೀರ್ಪು ನೀಡಿದ್ದು, ಆಗ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠವೇ ಅರ್ಜಿ ವಿಚಾರಣೆ ನಡೆಸಿ ತೀರ್ಮಾನಿಸಲಿ ಎಂದು ಅಭಿಪ್ರಾಯ ಪಡಲಾಗಿತ್ತು. ಈ ವಿಚಾರವು ಸೋಮವಾರ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಪೀಠದ ಮುಂದೆ ಪ್ರಸ್ತಾವವಾಗಿದ್ದು, ಸದ್ಯದಲ್ಲೇ ತ್ರಿಸದಸ್ಯ ಪೀಠ ರಚನೆ ಮಾಡುವುದಾಗಿ ಅವರು ಹೇಳಿದರು.

ಕರ್ನಾಟಕ ಸರಕಾರವು ಶಾಲೆ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿದ್ದು, ಅ. 13ರಂದು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿದ್ದರು. ಒಬ್ಬರು ಕರ್ನಾಟಕ ಸರಕಾರದ ಆದೇಶ ಎತ್ತಿ ಹಿಡಿದಿದ್ದರೆ, ಮತ್ತೊಬ್ಬರು ತಿರಸ್ಕರಿಸಿದ್ದರು.

ಸೋಮವಾರ ಹಿರಿಯ ವಕೀಲ ಮೀನಾಕ್ಷಿ ಅರೋರಾ ಈ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಕರ್ನಾಟಕದಲ್ಲಿ ಫೆ. 6 ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಈಗಲೂ ಹಿಜಾಬ್‌ ನಿಷೇಧ ಜಾರಿಯಲ್ಲಿದ್ದು, ಮಕ್ಕಳಿಗೆ ತೊಂದರೆಯಾಗಲಿದೆ. ಹೀಗಾಗಿ ಆದಷ್ಟು ಬೇಗ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಸರಕಾರಿ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶವಿಲ್ಲದೆ ಈ ಮಕ್ಕಳು ಖಾಸಗಿ ಕಾಲೇಜು ಸೇರಿದ್ದಾರೆ. ಆದರೆ ಪಿಯುಸಿ ಪರೀಕ್ಷೆಯನ್ನು ನಡೆಸಲು ಖಾಸಗಿ ಕಾಲೇಜುಗಳಿಗೆ ಅಧಿಕಾರವಿಲ್ಲ. ಸರಕಾರಿ ಕಾಲೇಜುಗಳಲ್ಲೇ ನಡೆಸಲಾಗುತ್ತದೆ. ಆಗ ಹಿಜಾಬ್‌ ಧರಿಸಿ ಹೋಗಲು ಆಗುವುದಿಲ್ಲ. ಹೀಗಾಗಿ ಆದಷ್ಟು ಬೇಗ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿಕೊಂಡರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next