ಧಾರವಾಡ: ಕೋಳಿಗೆ ಸಹಜವಾಗಿ ಎರಡು ಕಾಲುಗಳಿರುತ್ತವೆ. ಆದರೆ, ಇಲ್ಲೊಂದು ಕೋಳಿ ಮರಿ ಮೂರು ಕಾಲು ಹೊಂದಿ ಗಮನ ಸೆಳೆದಿದೆ. ಕೆಲಗೇರಿಯ ನಿವಾಸಿ ಇಲ್ಮುದ್ದೀನ್ ಮೊರಬ ಎಂಬುವರ ಕೋಳಿ ಫಾರ್ಮ್ಗೆ ಬಂದಿರುವ ಕೋಳಿ ಮರಿಗೆ ಇದೀಗ ರಾಜಾತಿಥ್ಯ ನೀಡಲಾಗುತ್ತಿದೆ. ಹುಬ್ಬಳ್ಳಿಯಿಂದ ಕಳೆದ ಮೂರು ದಿನಗಳ ಹಿಂದೆ ತರಿಸಿದ್ದ ಕೋಳಿ ಮರಿಗಳ ಪೈಕಿ ಈ ಮೂರು ಕಾಲಿನ ಮರಿ ಹೆಚ್ಚು ಗಮನ ಸೆಳೆಯುವಂತೆ ಮಾಡಿದೆ. ಇದಕ್ಕೆ ಎರಡು ಕಾಲುಗಳ ಜೊತೆಗೆ ಹಿಂದೆ ಮತ್ತೂಂದು ಕಾಲು ಹೊಂದಿದೆ. ಉಳಿದ ಮರಿಗಳಂತೆಯೇ ಈ ಮರಿ ಕೂಡ 800 ಗ್ರಾಂ ಇದ್ದು, ಆರೋಗ್ಯವಾಗಿದೆ. ಕಳೆದ ವರ್ಷ ಇಂತಹದ್ದೇ ಒಂದು ಕೋಳಿ ಬಂದಿತ್ತು. ಆದರೆ, ಅದಕ್ಕೆ ಒಂದೇ ಕಾಲು ಇತ್ತು. ಆ ಕೋಳಿ ಅನಾರೋಗ್ಯದಿಂದ ಸಾವನ್ನಪ್ಪಿತು. ಈಗ ಮೂರು ಕಾಲು ಇರುವ ಕೋಳಿ ಮರಿ ಬಂದಿದ್ದು, ಅದನ್ನು ಇನ್ನುಳಿದ ಕೋಳಿ ಮರಿಗಳ ಜೊತೆ ಬಿಡದೇ ಬೇರೆ ಕಡೆ ಇಟ್ಟು ಜೋಪಾನ ಮಾಡಲಾಗುತ್ತಿದೆ. ಉಳಿದ ಕೋಳಿ ಮರಿಗಳು ಈ ಕೋಳಿ ಮರಿಯ ಮೂರನೇ ಕಾಲನ್ನು ಹಿಡಿದು ಎಳೆದಾಡುತ್ತಿವೆ. ಹೀಗಾಗಿ ಅದನ್ನು ಪ್ರತ್ಯೇಕವಾಗಿ ಇಡಲಾಗಿದೆ. ಹಾರ್ಮೋನ್‌ಗಳಿಂದಾಗಿ ಈ ರೀತಿ ವಿಸ್ಮಯವಾಗಿರಬಹುದು. ಸದ್ಯ ಕೋಳಿ ಮರಿ ಆರೋಗ್ಯವಾಗಿದೆ. ಅದನ್ನು ಜೋಪಾನ ಮಾಡಲಾಗುವುದು ಎಂದು ಹೇಳುತ್ತಾರೆ ಕೋಳಿ ಫಾರಂ ಮಾಲೀಕ ಇಲ್ಮುದ್ದೀನ್.