ಬಿಜಾಪುರ್: ಛತ್ತೀಸ್‌ಗಡದ ಬಿಜಾಪುರ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಕಲಬುರಗಿಯ ಯೋಧ ಸೇರಿದಂತೆ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಕಾರ್ಯಾಚರಣೆ ವೇಳೆ, ಅಕಸ್ಮಾತಾಗಿ ಆ ಸ್ಥಳಕ್ಕೆ ಬಂದ ಇಬ್ಬರು ಹೆಣ್ಣುಮಕ್ಕಳಿಗೂ ಗುಂಡು ತಗುಲಿದ್ದು, ಒಬ್ಟಾಕೆ ಸ್ಥಳದಲ್ಲೇ ಅಸುನೀಗಿದರೆ, ಮತ್ತೂಬ್ಬಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕೇಶುಕುಟಲ್ ಗ್ರಾಮದ ಸಮೀಪ ಬೆಳಗ್ಗೆ 11 ಗಂಟೆ ವೇಳೆಗೆ ಎನ್‌ಕೌಂಟರ್ ನಡೆದಿದೆ. ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ತಂಡವು ಮೋಟಾರು ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ, ಏಕಾಏಕಿ ನಕ್ಸಲರು ಅವರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆ ಕೆಲಹೊತ್ತು ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆಯಲ್ಲಿ ಕರ್ನಾಟಕದ ಕಲಬುರಗಿಯವರಾದ ಸಬ್‌ಇನ್‌ಸ್ಪೆಕ್ಟರ್ ಮಹಾದೇವ ಪಿ.(50), ಉತ್ತರಪ್ರದೇಶದ ಅಲಿಗಡದ ಸಬ್‌ಇನ್‌ಸ್ಪೆಕ್ಟರ್ ಮದನ್‌ಪಾಲ್ ಸಿಂಗ್(52) ಹಾಗೂ ಕೇರಳದ ಇಡುಕ್ಕಿಯವರಾದ ಹೆಡ್ ಕಾನ್‌ಸ್ಟೇಬಲ್ ಸಾಜು ಒ.ಪಿ.(47) ಹುತಾತ್ಮರಾಗಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ನಕ್ಸಲರು ಭದ್ರತಾ ಪಡೆಗಳ ಬಳಿಯಿದ್ದ ಒಂದು ಎಕೆ-47 ರೈಫಲ್, ಅದರಲ್ಲಿದ್ದ 4 ಮ್ಯಾಗಜಿನ್‌ಗಳು, ಒಂದು ಬುಲೆಟ್ಪ್ರೂಫ್ ಜಾಕೆಟ್ ಮತ್ತು ವೈರ್‌ಲೆಸ್ ಸೆಟ್ ಅನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.