ಹರಿಹರ: ಇಲ್ಲಿನ ಗಾಂಧಿ ನಗರದ 34 ವರ್ಷದ ವ್ಯಕ್ತಿ ಸೇರಿ ಮೂವರಿಗೆ ಕೋವಿಡ್ ಸೋಂಕು ತಗುಲಿರುವುದು ಮಂಗಳವಾರ ವರದಿಯಾಗಿದೆ.
ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳ ವಾಹನ ಚಾಲಕನೆಂದು ಹೇಳಲಾಗಿರುವ ಈ ವ್ಯಕ್ತಿ, ಗಾಂಧಿನಗರದ ಎರಡನೇ ಕ್ರಾಸ್ ನಿವಾಸಿ. ಉಸಿರಾಟ ಸಮಸ್ಯೆ ಎಂದು ಜೂ. 26 ರಂದು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ಖಾಸಗಿ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿತ್ತು. ಆದರೆ ಉಸಿರಾಟ ಸಮಸ್ಯೆ ನಿವಾರಣೆಯಾಗದ ಕಾರಣ ಜು. 28ರಂದು ಮತ್ತೆ ಆಸ್ಪತ್ರೆಗೆ ದಾಖಲಾದಾಗ ಮತ್ತೂಮ್ಮೆ ಗಂಟಲು ದ್ರಾವಣ ಪರೀಕ್ಷೆಗೆ ಕಳಿಸಿದ್ದು, ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೌರಾಯುಕ್ತೆ ಎಸ್. ಲಕ್ಷ್ಮೀ, ನಗರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಗಾಂಧಿ ನಗರದ 2 ಮತ್ತು 3ನೇ ಕ್ರಾಸ್‌ನ ಪ್ರದೇಶಕ್ಕೆ ಬ್ಯಾರಿಕೇಡ್ ಹಾಕಿಸಿದರು. ಈ ಕಂಟೇನ್ಮೆಂಟ್ ಝೋನ್‌ನಲ್ಲಿ 47 ಮನೆಯ 215 ನಿವಾಸಿಗಳಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೋಂಕಿತ ಕುಟುಂಬದ 8 ಸದಸ್ಯರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದು, ಉಳಿದ ಸಂಪರ್ಕಿತರ ಪತ್ತೆ ನಡೆಸಲಾಗುತ್ತಿದೆ. ನಗರದ ಜಯಶ್ರೀ ಟಾಕೀಸ್ ಹಿಂಭಾಗದ ಚಿನ್ನಪ್ಪ ಕಾಂಪೌಂಡ್ ನಿವಾಸಿಯೊಬ್ಬರು ಹಾಗೂ ವಿದ್ಯಾನಗರ ಸಿ ಬ್ಲಾಕ್‌ನ ನಿವಾಸಿಯೊಬ್ಬರಲ್ಲೂ ಕೋವಿಡ್ ಸೋಂಕು ದೃಢಪಟ್ಟಿದೆ.
ಚಿನ್ನಪ್ಪ ಕಾಂಪೌಂಡ್‌ನ 40 ವರ್ಷದ ಟಿಬಿ ಕಾಯಿಲೆ ಇದ್ದ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ವಿದ್ಯಾನಗರ ಸಿ ಬ್ಲಾಕ್‌ನ 33 ವರ್ಷದ ವ್ಯಕ್ತಿ ಕೆಮ್ಮು, ಶೀತ, ಜ್ವರ ಎಂದು ಆಸ್ಪತ್ರೆಗೆ ತೆರಳಿದ್ದಾಗ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ರಾತ್ರಿ ವೇಳೆಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಎರಡೂ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳನ್ನಾಗಿಸಿದ್ದು, ಕುಟುಂಬಸ್ಥರನ್ನು ಕ್ವಾರಂಟೈನ್‌ಗೆ ಕಳಿಸುತ್ತಿದ್ದಾರೆ. ತಾಲೂಕಿನಲ್ಲಿ ಸೋಂಕು ತಗುಲಿದವರ ಸಂಖ್ಯೆ 22ಕ್ಕೆ ಏರಿದಂತಾಗಿದೆ. 12 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ತಾಲೂಕಿನ ಮೊದಲ ಪ್ರಕರಣ ಕಂಡು ಬಂದ ರಾಜನಹಳ್ಳಿ, ನಗರದ ಅಗಸರ ಬೀದಿ, ಎ.ಕೆ. ಕಾಲೋನಿ, ಇಂದಿರಾನಗರ, ಗಂಗಾನಗರ, ಈಗ ಗಾಂಧಿನಗರ ಸೇರಿ ಒಟ್ಟು 6 ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಗಳೆಂದು ಗುರುತಿಸಲಾಗಿದೆ.