ತಲೆಗೂದಲಿಗೆ ಹಣಿಗೆಯೇ ಮುಟ್ಟಿಸುವುದಿಲ್ಲವೇನೋ ಎಂಬಂತೆ ಅಲ್ಲಿಲ್ಲಿ ಹಾರಾಡುತ್ತ ಅವಳ ಹಿಡಿತಕ್ಕೆ ಸಿಗದೇ ಗುಂಗುರು ಗುಂಗುರಾಗಿದ್ದ ಸಾದಾ ಜಡೆಯ ಕೂದಲನ್ನವಳು ಹಿಂದಕ್ಕೆ ದೂಡುತ್ತ ಬರುತ್ತಿದ್ದರೆ ನಮಗೆಲ್ಲ ಸಿಟ್ಟು. ನಮ್ಮದೇ ತರಗತಿಯ ಹುಡುಗಿಯಾದ ಅವಳ ಮನೆಯಂಗಳದಲ್ಲಿ ಮೈಸೂರು ಬೃಂದಾವನದಲ್ಲಿದ್ದಂತೆ ರಾಶಿ ರಾಶಿ ಹೂಗಳನ್ನು ನೋಡಿದವರಾಗಿದ್ದೆವು. ನಾವಾಗಿಯೇ ಬೇಡಿದ ಒಂದು ಗಿಡದ ತುಂಡು, ಹೋಗಲಿ ಒಂದೇ ಒಂದು ಹೂವನ್ನು ಅವಳು ಗೆಳತಿಯರಿಗೆಂದೂ ತಂದದ್ದಿಲ್ಲ. ಆಸೆಬುರುಕಿ ಎಂದು ಅವಳನ್ನು ಹಳಿಯುತ್ತಿದ್ದ ನಮಗೆ ವಾಸ್ತವದ ಅರಿವಾಗಿದ್ದು ತಡವಾಗಿಯೇ.
ಕತ್ತಲಿನ್ನೂ ತನ್ನ ಅಧಿಕಾರ ಬಿಟ್ಟುಕೊಡುವ ಮೊದಲೇ ಅವಳು ಎದ್ದಾಗಿರುತ್ತಿತ್ತು. ಸಂಜೆಯೇ ಕಟ್ಟಿ ಮನೆಯಂಗಳದ ಬಟ್ಟೆ ಹಾಕುವ ತಂತಿಯಲ್ಲಿ ನೇತುಹಾಕಿದ್ದ ಅಬ್ಬಲ್ಲಿಗೆ, ಮಲ್ಲಿಗೆ, ಗೋರಟೆ ಹೂವಿನ ಮಾಲೆಗಳು ಇಬ್ಬನಿಯಿಂದ ನೆಂದು ಅರಳಬೇಕೋ ಬೇಡವೋ ಎಂದು ಗೊಣಗಾಡುತ್ತಿದ್ದಂತೆ ಹೂವಿಗಿಂತಲೂ ಮೆತ್ತಗೆ ಅವುಗಳನ್ನು ಎತ್ತಿ ಬಿದಿರಿನ ಬುಟ್ಟಿಯಲ್ಲಿ ಮಲಗಿಸಿಬಿಡುತ್ತಿದ್ದಳು. ಸೂರ್ಯ, “ತನ್ನ ರಾಜ್ಯಭಾರವಿನ್ನು’ ಎಂದು ಕತ್ತಲನ್ನೇಳಿಸಿ ಸಿಂಹಾಸನದ ಮೇಲೆ ಕುಳಿತಾಗ, ಆಕೆ ಸಣ್ಣ ಬುಟ್ಟಿಯೊಂದನ್ನು ಹಿಡಿದು ರೆಂಜೆ ಮರದಡಿಗೆ ನಡೆದಾಗಿರುತ್ತಿತ್ತು. ದೂರದಲ್ಲೇ ಚಪ್ಪಲಿ ಕಳಚಿಟ್ಟು ಜಾಗ್ರತೆಯಾಗಿ ಮುಂದಡಿಯಿಡುತ್ತಿದ್ದಳು. ಕತ್ತಲೆ ಹೋದ ದುಃಖದಲ್ಲಿ ಆಗಸದ ನಕ್ಷತ್ರಗಳೆಲ್ಲ ನೆಲಕ್ಕುದುರಿದಂತೆ ಕಾಣಿಸುತ್ತಿದ್ದ ರೆಂಜೆ ಹೂಗಳು. ಬೀಳುವಾಗ ಸ್ವರ್ಗ ಲೋಕವನ್ನು ಹಾದು ಅಲ್ಲಿನ ದೇವತೆಗಳ ಸುಗಂಧವನ್ನು ಪೂಸಿ ಬಂದಂತಹ ಪರಿಮಳ. ಆದರೆ, ಅವಳ ಮನಸ್ಸು ಇದನ್ನೆಲ್ಲ ಗ್ರಹಿಸದೇ ಹೂಗಳ ರಾಶಿಯನ್ನು ನೋಡುತ್ತಿದ್ದಂತೆ, “ಎಷ್ಟುದ್ದ ಸಿಗಬಹುದಿದು’ ಎಂದು ಮನದೊಳಗೇ ಮಾಲೆ ನೇಯುತ್ತಿತ್ತು. ಅದನ್ನು ತಂದು ಕೊಂಚ ಬೆಳಕಿರುವಲ್ಲಿ ಕುಳಿತು ಸೂಜಿಯ ಮೂಲಕ ಸಾಗಿಸಿ ನೂಲಿನಲ್ಲಿ ನೇಯ್ದರಾಯಿತು. ನಕ್ಷತ್ರಗಳ ಉದ್ದದ ಮಾಲೆ.
ಅಷ್ಟೂ ಹೂಗಳನ್ನು ಹೊತ್ತ ಬುಟ್ಟಿಯನ್ನು ಹಿಡಿದು ತಡಮೆ ದಾಟಿ ವಾಹನಗಳು ಓಡಾಡುವ ರಸ್ತೆ ಬಳಿಯ ಮೋರಿಯಲ್ಲಿ ಕುಳಿತು ಬಸ್ಸುಗಳಿಗೆ ಕಾಯುತ್ತಿದ್ದಳು. ಆ ದಾರಿಯಾಗಿ ಬರುವ ಬಸ್ಸುಗಳೆಲ್ಲ ಅಲ್ಲಿ ನಿಂತು ಇವಳು ಕೊಟ್ಟ ಹೂಮಾಲೆಯನ್ನು ತಮ್ಮ ದೇವರ ಫೊಟೋಗಳಿಗೇರಿಸಿ ಇವಳ ಕೈಗೆ ನೋಟುಗಳನ್ನು ಕೊಟ್ಟರೆ ಇವಳ ಬೆಳಗು ಸಂಪನ್ನವಾಗಿಬಿಡುತ್ತಿತ್ತು. ಮನೆ ತಲುಪಿದ ಕೂಡಲೇ ಅವ್ವನ ಚಾಚಿದ ಕೈಗಳಿಗೆ ಆ ಹಣವನ್ನಿಟ್ಟು ಗಬಗಬನೆ ತಂಗಳನ್ನ ಉಂಡೆದ್ದು ಶಾಲೆಯ ಚೀಲ ಹಿಡಿದು ಬರುತ್ತಿದ್ದವಳಿಗೆ, ಗಿಡದಲ್ಲೆಲ್ಲಾದರೂ ಉಳಿದ ಹೂ ಕಾಣಿಸಿದರೆ ಬೇಸರ. “ನಾಳೆ ಸರಿಯಾಗಿ ಕೊಯ್ಯಬೇಕು’ ಎಂದು ನಿರ್ಧರಿಸಿ ಹೊರಡುವವಳಿಗೆ ಮನೆಯಂಗಳದ ಹೂಗಳು ಬದುಕಿನ ಕಠಿಣ ದಾರಿಯನ್ನು ಸವೆಸಲು ಸಹಾಯ ಮಾಡುತ್ತಿದ್ದವೇ ಹೊರತು ಅವುಗಳ ಅಂದಚಂದ, ಕೋಮಲತೆ ಕಂಡದ್ದೇ ಇಲ್ಲ.
ಅದೊಂದು ಶುಭ ಸಮಾರಂಭ. ಎಲ್ಲಾ ಕಡೆ ಸೀರೆಯುಟ್ಟ ನೀರೆಯರದ್ದೇ ಕಾರುಬಾರು. ಅದರಲ್ಲೂ ಕುಳಿತ ಸಭೆಯ ಹೆಣ್ಣುಮಕ್ಕಳಿಗೆಲ್ಲ ಹಣೆಗೆ ತಿಲಕವಿಡುವ, ಕೈಗೆ ಸುಗಂಧದ್ರವ್ಯ ಪೂಸುವ, ತಲೆಗೆ ಹೂಮುಡಿಸುವ ಹುಡುಗಿಯರ ಗುಂಪುಗಳ ಬಳುಕಾಟ ಕಣ್ಣುಗಳಿಗೂ ತಂಪು. “ಈಗಿನ ಮಕ್ಕಳಿಗೇನು ಗೊತ್ತು’ ಎಂದು ಅವರ ಕೆಲಸಕಾರ್ಯಗಳನ್ನು ಗಮನಿಸಲೆಂದೇ ಜೊತೆಗಿರುವ ಹಿರಿಯಾಕೆಯೊಬ್ಬಳು ಕಣ್ಣಲ್ಲಿ ಕಣ್ಣಿಟ್ಟು ಅವರ ಕಾರ್ಯವಿಧಾನದಲ್ಲಿ ತಪ್ಪು ಹುಡುಕಿ ಹಣಿಯುತ್ತಿದ್ದಳು. ಕುಳಿತವರಲ್ಲಿ ಒಬ್ಬರನ್ನು ಬಿಟ್ಟರೂ ತಪ್ಪಾಗುವ ಭಯ ಹುಡುಗಿಯರಿಗೆ. ಹಾಗಾಗಿಯೇ ಕುಳಿತವರ ಸಾಲು ಹಿಡಿದೇ ಹೋಗುತ್ತಿದ್ದರು. ಇನ್ನೇನು ತಲೆ ತಗ್ಗಿಸಿ ಕುಳಿತಿದ್ದ ಒಬ್ಬಳ ಹಣೆ ಎತ್ತಿ ತಿಲಕವಿಡಬೇಕು ಎಂದು ಆ ಹುಡುಗಿಯ ಕೈ ಮೇಲಕ್ಕೆದ್ದಿತ್ತು. ಹಿರಿಯಾಕೆಯ ಕಣ್ಣು ಏನೋ ಸನ್ನೆ ಮಾಡಿತ್ತು. ಹುಡುಗಿಗೆ ಇದೀಗ ಧರ್ಮಸಂಕಟ. ವಿಷಯ ಏನೆಂದು ಗೊತ್ತಾಗದಷ್ಟು ಸಣ್ಣವಳಲ್ಲ, ಹಾಗಾಗಿಯೇ ಆ ಕೋಪದ ಕಣ್ಣುಗಳನ್ನೆದುರಿಸುತ್ತ ಮುಂದುವರಿದಳು. ಹಿರಿಯಾಕೆ ಕಣ್ಣು ಇನ್ನಷ್ಟು ದೊಡ್ಡದಾಗಿಸಿದಳು, ಕೇಳಿಸಬಾರದೆಂದುಕೊಂಡರೂ ಗೊಣಗುವ ತುಟಿಗಳ ಕಂಪನ ಅವಳನ್ನೇ ನಡುಗಿಸುತ್ತಿತ್ತು. ಆಕೆ ನೋಡುತ್ತಿದ್ದಂತೆಯೇ ಬಳುಕುವ ಹುಡುಗಿ, ಕುಳಿತ ಹೆಣ್ಣುಮಗಳ ಮುಡಿಗೆ ಹೂವಿಟ್ಟು, ಹಣೆಗೆ ತಿಲಕವಿಟ್ಟಾಗಿತ್ತು. ತಿಲಕವಿರಿಸಿಕೊಂಡು ಹೂ ಮುಡಿಸಿಕೊಂಡಾಕೆಯ ಮೊಗದಲ್ಲಿ ಕೋಟಿ ನಕ್ಷತ್ರಗಳ ಬೆರಗಿನ ಬೆಳಕು. ಸೆಳೆಮಿಂಚಿನಂತೆ ಆ ಬೆರಗಿನೊಳಗೆ ತನ್ನನ್ನೂ ಅದು ಎಳೆದುಕೊಂಡಂತಹ ಅನುಭವ ಹಿರಿಯಾಕೆಗೀಗ. ಹಿರಿತನವಿರುವುದು ಪ್ರಾಯದಲ್ಲಲ್ಲ ಎಂಬ ಅರಿವಾಗುತ್ತಿದ್ದಂತೆ ಹನಿದುಂಬಿದ ಕಣ್ಣುಗಳಿಗೆ ಹುಡುಗಿಯೀಗ ದೇವತೆಯಂತೆ ಕಂಡಿದ್ದಳು.
ರಜೆಯಲ್ಲಿ ಮನೆಗೆ ಬಂದಿದ್ದ ವಿದೇಶದಲ್ಲಿ ನೆಲೆಸಿದ್ದ ಪುಳ್ಳಿ. ಅಜ್ಜಿಗೋ ಆಕೆಯ ಭಾಷೆ ಬಾರದು- ಪುಳ್ಳಿಗೆ ಅಜ್ಜಿಯ ಮಾತು ಅರ್ಥವಾಗದು. ಇಬ್ಬರ ನಡುವೆ ಮೌನವಿತ್ತು. ದೇವರಿಗೆಂದು ಕೊಯ್ದು ಉಳಿದ ಮಲ್ಲಿಗೆ ಹೂಗಳನ್ನು ಪುಳ್ಳಿ ಹಿಡಿದುಕೊಂಡು ಕುಳಿತಿರುವುದು ಕಂಡಿತು. ಮೆತ್ತಗೆ ಅವಳ ಬಳಿಸಾರಿದ ಅಜ್ಜಿ ಬಾಳೆಬಳ್ಳಿಯ ಒಂದು ತುದಿಯನ್ನು ಅವಳ ಅಂಗಿಗೆ ಕಟ್ಟಿ, ಅವಳ ಕಾಲನ್ನು ಉದ್ದ ಮಾಡಿ ಹಿಡಿದು ಆ ಪುಟ್ಟ ಹೆಬ್ಬೆರಳಿಗೆ ಬಳ್ಳಿ ಸುತ್ತಿ ಸ್ವಲ್ಪ ಉದ್ದ ಹಾಗೆಯೇ ಉಳಿಯುವಂತೆ ಮಾಡಿ ಬಳ್ಳಿಯ ನಡುಭಾಗವನ್ನು ಮೊದಲು ಕಟ್ಟಿದ ಅಂಗಿಯ ಭಾಗಕ್ಕೆ ಕಟ್ಟಿದಳು. ಪಕ್ಕದಲ್ಲಿದ್ದ ಹೂವಿನ ರಾಶಿಯಿಂದ ಎರಡೇ ಎರಡು ಹೂವನ್ನು ತೊಟ್ಟಿನ ಭಾಗ ಒಂದೇ ಬದಿಗೆ ಬರುವಂತೆ ಹಿಡಿದು ಬಳ್ಳಿಯ ನಡುವಿಗೆ ತುರುಕಿಸಿ ಉಳಿದ ಬಳ್ಳಿಯ ಭಾಗದಿಂದ ಗಂಟು ಹಾಕಿ ಎಳೆದಳು. ಮತ್ತೆರಡು… ಮತ್ತೆರಡು… ಮತ್ತೆರಡೇ ಹೂವು, ಇದೀಗ ಪುಳ್ಳಿಯ ಪುಟ್ಟ ಕೈಗಳು ಎರಡು ಹೂಗಳನ್ನು ನಡುವಿನಲ್ಲಿರಿಸಿ ಬಳ್ಳಿ ಎಳೆದು ಗಂಟು ಹಾಕಿತು. ಗಂಟು ಬಲವಾಯಿತೇನೋ. ಹೂಗಳು ತೊಟ್ಟಿನ ಭಾಗದಲ್ಲಿ ತುಂಡಾಗಿ ಬಿದ್ದವು. ಅಜ್ಜಿಯ ಕೈಗಳೀಗ ಪುಳ್ಳಿಯ ಕೈಗಳನ್ನು ಮೃದುವಾಗಿ ಹಿಡಿಯಿತು. ಹೂಗಳನ್ನು ಜೋಡಿಸಿ ಎಳೆಯುವ ಗಂಟಿಗೆ ಎಷ್ಟು ಬಲ ಬೇಕೋ ಅಷ್ಟೇ ಬಲ ಪ್ರಯೋಗದ ರಹಸ್ಯವನ್ನು ಪುಳ್ಳಿಗೆ ಕಲಿಸಿಕೊಟ್ಟಿತು. ಅಷ್ಟೇ! ಮತ್ತಿನದೆಲ್ಲ ಸಲೀಸು. ಪುಳ್ಳಿ ಮತ್ತು ಅಜ್ಜಿಯ ನಂಟಿಗೆ ಈ ಹೊಸ ಕಲಿಕೆ ನಾಂದಿಯಾಯಿತು. ಅವರಿಗೀಗ ಹೂಗಳ ಭಾಷೆಯೇ ತಮ್ಮ ಭಾಷೆಯಾಯಿತು.
ಹೂಗಳು ಯಾರಿಗಾಗಿಯೂ ಅರಳುವುದಿಲ್ಲ. ಆದರದು ನಮಗಾಗಿಯೇ ಅರಳಿದ್ದು ಎಂದುಕೊಂಡು ಆ ಕ್ಷಣವನ್ನು ಬದುಕುತ್ತೇವಲ್ಲ, ಅದು ನಮ್ಮ ಬದುಕನ್ನೂ ಪರಿಮಳಯುಕ್ತವಾಗಿಸುವ ದಾರಿ.
ಅನಿತಾ ನರೇಶ ಮಂಚಿ