Advertisement

ಪೊಲೀಸರ ಮೇಲೆ ಹಲ್ಲೆ ನಡೆಸಿದ ಮೂವರ ಸೆರೆ

11:42 AM Jan 14, 2018 | |

ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ, ತಪಾಸಣೆ ನಡೆಸುತ್ತಿದ್ದ ಸಂಚಾರ ಠಾಣೆ ಎಎಸ್‌ಐ ಹಾಗೂ ಪೇದೆ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Advertisement

ಬಸವೇಶ್ವರ ನಗರದ ಕಿರಣ್‌, ಚಂದ್ರು ಹಾಗೂ ಶ್ರೀನಿವಾಸಗೌಡ ಬಂಧಿತರು. ಆರೋಪಿಗಳ ಪೈಕಿ ಕಿರಣ್‌ ಮತ್ತು ಶ್ರೀನಿವಾಸ್‌ಗೌಡ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಚಂದ್ರು ಕಾರು ಚಾಲಕನಾಗಿದ್ದಾನೆ. ಹಲ್ಲೆಯಿಂದ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಎಎಸ್‌ಐ ವೆಂಕಟೇಶ್‌ ಹಾಗೂ ಪೇದೆ ಶ್ರೀಶೈಲ ಹಲ್ಲೆಗೊಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ರಾತ್ರಿ 1.30ಕ್ಕೆ ಗಂಟೆ ಸುಮಾರಿಗೆ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಿಎಂಡೂ ಕಾರಿನಲ್ಲಿ ವೇಗವಾಗಿ ಬಂದಿದ್ದಾರೆ. ಈ ವೇಳೆ ಸಂಚಾರ ಠಾಣೆ ಸಿಬ್ಬಂದಿ ಡ್ರಿಂಕ್‌ ಆಂಡ್‌ ಡ್ರೈವ್‌ ತಪಾಸಣೆಗೆಂದು ಕಾರು ತಡೆದಿದ್ದಾರೆ.

ತಪಾಸಣೆ ನಡೆಸಿದಾಗ ಚಾಲಕ ಮದ್ಯಪಾನ ಮಾಡಿರುವುದು ಖಚಿತವಾಗಿದ್ದು, ವಾಹನವನ್ನು ಪಕ್ಕಕ್ಕೆ ಹಾಕುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಆರೋಪಿಗಳು ಪೇದೆ ಶ್ರೀಶೈಲ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕಿಟಕಿ ಮೂಲಕ ಪೇದೆಯ ಕಾಲರ್‌ ಹಿಡಿದ ಚಾಲಕ ಸುಮಾರು 150 ಮೀ. ಎಳೆದೊಯ್ದಿದ್ದಾನೆ.

ಪೊಲೀಸರ ಮೇಲೆ ಕಾರು ಹರಿಸುವ ಯತ್ನ: ಚಾಲಕ ಮದ್ಯಪಾನ ಮಾಡಿರುವುದು ಖಚಿತವಾಗಿದ್ದರಿಂದ ಕಾರನ್ನು ಪಕ್ಕದಲ್ಲಿ ನಿಲ್ಲಿಸುವಂತೆ ಎಎಸ್‌ಐ ವೆಂಕಟೇಶ್‌ ಸೂಚಿಸಿದ್ದಾರೆ. ಆದರೆ ಕಾರಿನೊಳಗಿದ್ದ ಕಿರಣ್‌ ಹಾಗೂ ಶ್ರೀನಿವಾಸಗೌಡ ಕಾರು ನಿಲ್ಲಿಸದಂತೆ ಚಾಲಕ ಚಂದ್ರುಗೆ ಸೂಚಿಸಿದ್ದು, ಪೇದೆ ಮೇಲೆಯೇ ಕಾರು ಹತ್ತಿಸಲು ಮುಂದಾಗಿದ್ದಾರೆ.

Advertisement

ಅಲ್ಲದೇ, ಕಾರಿನಲ್ಲಿ ಕುಳಿತುಕೊಂಡೇ ಪೇದೆ ಶ್ರೀಶೈಲ ಅವರನ್ನು ಹಿಡಿದುಕೊಂಡ ಚಾಲಕ ಚಂದ್ರು, ಸುಮಾರು 150 ಮೀಟರ್‌ ದೂರ ಎಳೆದೊಯ್ದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಫ‌ುಟ್‌ಪಾತ್‌ ಹತ್ತಿದೆ. ಕೂಡಲೇ ಎಎಸ್‌ಐ ರಕ್ಷಣೆಗೆ ಹೋದಾಗ ಕಾರಿನಿಂದ ಇಳಿದ ಆರೋಪಿಗಳು, ಸಿಬ್ಬಂದಿಯ ಹೊಟ್ಟೆ ಹಾಗೂ ಮುಖದ ಭಾಗಕ್ಕೆ ತೀವ್ರ ಹಲ್ಲೆ ನಡೆಸಿದ್ದಾರೆ. ಪರಿಣಾಮ ಪೇದೆ ಶ್ರೀಶೈಲ ಅವರ ಮುಖದ ಗಾಯಗೊಂಡು ರಕ್ತಸ್ರಾವವಾಗಿದೆ.

ಇಷ್ಟಕ್ಕೇ ಸುಮ್ಮನಾಗದ ಆರೋಪಿಗಳು, ಆಲ್ಕೋಮೀಟರ್‌ ಹಾಗೂ ಪೇದೆಯ ಸ್ಮಾರ್ಟ್‌ಫೋನ್‌ ಒಡೆದು ಹಾಕಿದ್ದಾರೆ. ನಂತರ “ನಮ್ಮ-100’ಕ್ಕೆ ಕರೆ ಮಾಡಿ ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಸಂಚಾರ ಪೊಲೀಸರು ಆರೋಪಿಗಳನ್ನು ಬಂಧಿಸಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಆರೋಪಿಗಳ ವಿರುದ್ಧ ಸಮವಸ್ತ್ರದಲ್ಲಿದ್ದ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದಡಿ ಪ್ರಕರರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next