Advertisement
ದೇವರನಾಮ ಬಿಟ್ಟು ಸಣ್ಣಗೆ ಬೇರೆ ಒಂದು ಹಾಡೂ ಗುನುಗಬಾರದು. ಅಜ್ಜಿಯೋ ಅಮ್ಮನೋ ದೊಡ್ಡ ಕಣ್ಣು ಬಿಟ್ಟು ಹೆದರಿಸುತ್ತಿದ್ದರು. “ನಾಳೆ ಮದುವೆಯಾಗಿ ಬೇರೆ ಮನೆಗೆ ಹೋಗುವ ಹುಡುಗಿ ಕೊಂಚ ಘನ ಗಂಭೀರ ಕಲಿ’ ಎನ್ನುತ್ತಿದ್ದರು. ನಮ್ಮ ಇಷ್ಟದ ಹಾಗೆ ಮಲಗಲೂ ಅವಕಾಶವಿಲ್ಲ. “ಏನದು ಹೆಣ್ಣುಮಕ್ಕಳು ಅಂಗಾತನಾಗಿ ಗಂಡಸಿನ ಹಾಗೆ ಮಲಗೋದು, ಪಕ್ಕಕ್ಕೆ ತಿರುಗಿ ಮಲಗು’ ಎಂದು ಗದರಿಸುತ್ತಿದ್ದರು. ಕತೆಪುಸ್ತಕ ಓದಿದರೆ ಕೆಟ್ಟು ಹೋಗುತ್ತಾರೆಂದು ಅದೂ ಓದಬಾರದು. ತೀರಾ ಹೊತ್ತು ಕೊಲ್ಲಲು ಕಷ್ಟವಾದರೆ ಬೇಕಾದರೆ ಒಂದು ನಾಲ್ಕು ಜನ ಮಕ್ಕಳಿಗೆ ಮನೆಪಾಠ ಹೇಳಿಕೊಡಬಹುದು. ಹೊರಗೆ ಕೆಲಸಕ್ಕೆ ಕಳಿಸುವುದೂ ಒಂದು ಆಂದೋಲನವೇ. ಟೀಚರ್ ಕೆಲಸ ಅಂದರೆ ಸ್ವಲ್ಪ ವಾಸಿ.
ಅಬ್ಟಾ ಈ ಅಮ್ಮ ಇನ್ನೂ ಹಳೆ ಕಾಲದವಳ ತರಾ ಆಡುತ್ತಾಳೆ. ತಾನು ಕಟ್ಟುನಿಟ್ಟಿನಲ್ಲಿ ಸಂಪ್ರದಾಯದಲ್ಲಿ ಬೆಳೆದೆ ಎಂದು ನಮ್ಮನ್ನೂ ಹಾಗೆ ಬೆಳೆಸಲು, ಅದೇ ಗೊಡ್ಡು ಸಂಪ್ರದಾಯ ಹೇರಲು ಬರುತ್ತಾಳೆ. ಕಾಲೇಜಿಗೆ ಹೋಗಲು ಲಂಗದಾವಣಿಯನ್ನೇ ಹಾಕಬೇಕಂತೆ. ಥೂ! ಏನು ಗೋಳ್ಳೋ! ಹೋಗಲಿ ಅದೇ ಹಾಕೋಣ, ನಾನಂತೂ ನಂಗಿಷ್ಟದ ಬಣ್ಣದ ಲಂಗದಾವಣಿಯನ್ನು ಮ್ಯಾಚಿಂಗ್ ಬಳೆಗಳನ್ನು ತಂದುಕೊಂಡಿದ್ದೇನೆ. ನಮ್ಮ ಕಾಲೇಜಿಗೆ ಸುನೀತಾ ಅಂತ ಬರ್ತಾಳೆ, ಯಾವಾಗಲೂ ಪಂಜಾಬಿ ಡ್ರೆಸ್ ಹಾಕ್ತಾಳೆ. ಎಷ್ಟು ಚೆಂದ ಇರತ್ತೆ. ಭುಜದ ಎರಡೂ ಕಡೆ ಬರುವ ಆಗಾಗ ಜಾರುವ ದುಪ್ಪಟ್ಟಾವನ್ನು ಸ್ಟೈಲಾಗಿ ಏರಿಸಿಕೊಳ್ಳೋದರಲ್ಲಿ ಏನು ಮಜಾ! ಇರಲಿ ಇನ್ನು ಸ್ವಲ್ಪ ದಿನ ಕಳೀಲಿ, ಆಮೇಲೆ ನಾನೂ ತೊಗೊಳೆ¤àನೆ. ಬಿಡ್ತೀನಾ! ಬಟ್ಟೆಗಳನ್ನು ಅಮ್ಮನೇ ಬಂದು ಕೊಡಿಸಬೇಕಂತೆ. ಛೆ! ಈ ಅಮ್ಮನಿಗೆ ಒಂದೂ ಟೇಸ್ಟ್ ಇಲ್ಲ ಎಂಥಧ್ದೋ ಕಲರ್ ಆರಿಸ್ತಾಳೆ. ಅದಕ್ಕೆ ನಾನು ಅಪ್ಪನಿಗೆ ಬೆಣ್ಣೆ ಸವರಿ ಪಕ್ಕದ ಮನೆಯ ಲಲಿತೆಯ ಜೊತೆ ಹೋಗಿ ನಂಗೆಂಥದ್ದು ಬೇಕೋ ಅಂಥದ್ದು ತಂದುಕೊಂಡೆ.
Related Articles
Advertisement
ಮಗಳು…ಅಯ್ಯೋ ಈ ಅಜ್ಜಿಯ ಕಾರುಬಾರಿನಲ್ಲಿ ಮನೇಲಿ ಜೋರಾಗಿ ಉಸಿರಾಡೋದೂ ಕಷ್ಟಾನಪ್ಪಾ. ಮೊದಲೇ ಕೈಲಾಗಲ್ಲ ತನ್ನ ಪಾಡಿಗೆ ತಾನು ಇರಬಾರದೇ? ಅಮ್ಮ ಎಷ್ಟೋ ವಾಸಿ. ಕೆಲಸಕ್ಕೆ ಹೋಗೋದರಿಂದ ಅಮ್ಮನಿಗೆ ಹೊರಗಿನ ಪ್ರಪಂಚ ಹೇಗಿರುತ್ತೆ ಅಂತ ಗೊತ್ತು. ಇನ್ನು ಈ ಅಜ್ಜಿ ಗೆ ಏನು ಗೊತ್ತು? ನನಗೆ ತುಂಬಾ ಸಲಿಗೆ ಕೊಟ್ಟಿದ್ದೇನೆಂದು ಅಮ್ಮನಿಗೂ ಬೈಯುತ್ತಾಳೆ. ಅಜ್ಜಿ ನಮ್ಮನೆಗೆ ಬಂದಾಗಲೆಲ್ಲಾ ನಂಗೂ ಅವಳಿಗೂ ಲಟಾಪಟಿ. “ಈ ಪ್ಯಾಂಟ್ ಹಾಕಬೇಡ, ಟೀ ಶರ್ಟ್ ಟೈಟು, ಬೇರೆ ಹಾಕ್ಕೋ. ಹಣೆಗೆ ಲಕ್ಷಣವಾಗಿ ಕುಂಕುಮ ಇಡು. ಮಲ್ಲಿಗೆ ಹೂವಿದೆ. ಲಕ್ಷಣವಾಗಿ ಮುಡಕೊಂಡು ಹೋಗಬಾರದಾ’ ಹೀಗೇ ಇವಳ ವಟವಟ. ಹುಶ್! ಜೀನ್ಸ್ ಹಾಕಿ ಯಾರಾದ್ರೂ ಮಲ್ಲಿಗೆ ಮುಡೀತಾರಾ? ಇವಳಿಗೆ ಹುಚ್ಚಾ? ಅಷ್ಟು ಎತ್ತರದ ಚಪ್ಪಲಿ ಯಾಕೆ ಹಾಕ್ತೀಯ ಸೊಂಟ ಉಳುಕಲ್ವಾ? ಅಂತಾಳೆ. “ಅಯ್ಯೋ ಅಜ್ಜಿ , ನೀನು ಸದ್ಯ ಸುಮ್ಮನಿರು. ನಿನ್ನ ಬಾಯಿ ಬಂದ್ ಮಾಡಲು ಏನು ಮಾಡಬೇಕು’ ಎಂದರೆ ಅಮ್ಮನನ್ನು ಜೋರಾಗಿ ಕರೆಯುತ್ತಾಳೆ “ನೋಡೇ ನಿನ್ನ ಮಗಳ ಮಾತು ಕೇಳಿದೆಯಾ?’ ಅಮ್ಮ ಪಾಪ ನನಗೂ ಹೇಳಲಾರದೆ ಅಜ್ಜಿಗೂ ಸಮಾಧಾನ ಮಾಡಲಾರದೆ ಕಕ್ಕಾಬಿಕ್ಕಿಯಾಗುತ್ತಾಳೆ. ನಂಗೇ ಹೇಳ್ತಾಳೆ, “ಅವಳಿಗೆ ಎದುರುತ್ತರ ಕೊಡಬೇಡ ಪುಟ್ಟಿà, ನಿಂಗಿಷ್ಟ ಬಂದ ಹಾಗಿರು. ಅವಳ ಕಣ್ಣಿಗೆ ಹೆಚ್ಚು ಬೀಳಬೇಡ’ ಅಂತ. ಅಜ್ಜಿ ಮೇಲೆ ಎಷ್ಟೇ ಕೋಪ ಇದ್ದರೂ ಅವಳು ಮಾಡುವ ತಿಂಡಿಗಳು ವಾವ್! ಸೂಪರ್ರಾಗಿರತ್ತೆ. ಅಜ್ಜಿ ಮಾಡುವ ಕೋಡುಬಳೆ ಐದು ಬೆರಳಿಗೂ ಒಂದೊಂದು ಜೋಡಿಸಿ ಮೆಲ್ಲುವಾಗ ಅಜ್ಜಿಯಂತಹ ದೇವತೆಯೇ ಇಲ್ಲಾ ಅನಿಸತ್ತೆ. ಆಗ ಮಾತ್ರ ಅಜ್ಜಿ ಹೇಳಿದ್ದೆಲ್ಲಾ ಮೌನಗೌರಿ ತರಾ ಕೇಳಿ ಅಜ್ಜಿ ಕೈಲಿ ಮುದ್ದು ಮಾಡಿಸ್ಕೊಳ್ತೀನಿ. ಇತ್ತೀಚೆಗೆ ನನ್ನ ಫ್ರೆಂಡ್ ನಯನ್ ಮೇಲೆ ಅಜ್ಜಿಗೆ ಒಂದು ಕಣ್ಣು. ಅವನು ಬೇರೆ ಜಾತಿ, ಅವನ ಜೊತೆ ಏನು ನಿನ್ನ ಗೆಳೆತನ, ತಿರುಗಾಟ’ ಅಂತಾಳೆ. ಅಮ್ಮ ಒಳಗೇ ಮುಸಿ ಮುಸಿ ನಗುತ್ತಾಳೆ. ಅಜ್ಜಿಗೆ ಗೊತ್ತಿಲ್ಲ , ನಾನು ನಯನ್‌ನ್ನೇ ಮದುವೆ ಆಗ್ತಿàನಿ ಅಂತ. ತಿಳಿದರೆ ಬಾಯಿ ಬಡಿದುಕೊಳ್ತಾಳೆ. ಆದರೆ ನಾನು ನಯನ್ ಡಿಸೈಡ್ ಮಾಡಿ ಆಗಿದೆ. ನನ್ನ ಅವನ ಅಪ್ಪ , ಅಮ್ಮ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಅಜ್ಜಿನ ಹೇಗೋ ಒಪ್ಪಿಸೋಣ ಬಿಡು, ಇನ್ನೂ ಟೈಮಿದೆಯಲ್ಲ !