ಶಿವಮೊಗ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಶಿವಮೊಗ್ಗದ ಬಿಎಚ್ ರಸ್ತೆ ನದಿಯಂತಾಗಿದೆ. ರಸ್ತೆ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ನಿಂತಿರುವ ಪರಿಣಾಮ ಬಿಎಚ್ ರಸ್ತೆ ಮೂರು ಕಡೆ ಬ್ಲಾಕ್ ಆಗಿದೆ.
ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಒಂದು ಕಡೆ ಹಾಗೂ ಶಿವಮೊಗ್ಗ ನಗರದ ಹೊರವಲಯದ ಎರಡು ಕಡೆ ಬಿಎಚ್ ರಸ್ತೆ ಸಂಚಾರ ಸ್ಥಗಿತವಾಗಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ರಸ್ತೆ ಮೇಲೆ ನಿಂತಿರುವ ನೀರನ್ನು ಹೊರಕಳುಹಿಸಲು ಹರಸಾಹಸ ಪಡುತ್ತಿದ್ದಾರೆ. ಜೆಸಿಬಿ ಬಳಸಿ ರೋಡ್ ಡಿವೈಡರ್ ಒಡೆದು ನೀರು ಹೊರಕಳಿಸಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:ವಿಟ್ಲ: ಭಾರಿ ಮಳೆಗೆ ರಸ್ತೆಗೆ ಬಿದ್ದ ಮರ : ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಷ್ಠಿತ ಬಡಾವಣೆಗಳ ಮನೆಗಳಿಗೂ ನೀರು ನುಗ್ಗಿದೆ. ಗೋಪಾಲಗೌಡ ಬಡಾವಣೆ, ಹೊಸಮನೆ, ಆರ್ ಎಂ ಎಲ್ ನಗರದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸುತ್ತಿದ್ದಾರೆ. ಐಷಾರಾಮಿ ಕಾರುಗಳು ನೀರಿನ ಮಧ್ಯೆ ಸಿಲುಕಿಕೊಂಡಿವೆ.
ಅಪಾಯಕ್ಕೆ ಆಹ್ವಾನ: ರಸ್ತೆ ಹಾಗೂ ಫುಟ್ ಪಾತ್ ಪೂರ್ತಿ ನೀರು ಆವರಿಸಿರುವುದರಿಂದ ರಸ್ತೆ ಪಕ್ಕದಲ್ಲಿರುವ ಯುಜಿಡಿ ಗುಂಡಿಗಳು ಸುಳಿಯನ್ನು ನಿರ್ಮಾಣ ಮಾಡಿವೆ. ರಸ್ತೆಯಲ್ಲಿ ನೀರು ತುಂಬಿರುವ ಕಾರಣ ಇವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಯಾರಾದರೂ ಈ ಸುಳಿಗೆ ಸಿಕ್ಕಲ್ಲಿ ಯುಜಿಡಿ ಒಳಗೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ರಸ್ತೆ ಪಕ್ಕದಲ್ಲೆ ಈ ಸುಳಿಗಳು ಇರುವುದು ಆತಂಕಕ್ಕೆ ಕಾರಣವಾಗಿದೆ. ರಸ್ತೆ ಪಕ್ಕದ ಫುಟ್ ಪಾತ್ ನಲ್ಲಿ ನೀರಿನಲ್ಲಿ ನಡೆದುಕೊಂಡು ಹೋಗುವವರು ತಿಳಿಯದೇ ಈ ಸುಳಿಗಳ ಬಳಿ ಕಾಲಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.