Advertisement

ಇದ್ದೂ ಇಲ್ಲದಂತಿದೆ‌ ಹುನಗುಂದ ಆಸ್ಪತ್ರೆ

05:12 PM Oct 26, 2018 | |

ಹುನಗುಂದ: ತಾಲೂಕಿನ ಬಡರೋಗಿಗಳಿಗೆ ಆಸರೆ ಆಗಬೇಕಿರುವ ಹುನಗುಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ.  100 ಹಾಸಿಗೆಯ ದೊಡ್ಡ ಆಸ್ಪತ್ರೆಯಾಗಿದ್ದರೂ ಮೂವರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ನಿತ್ಯ ಪರದಾಡಿ, ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಕಳೆದೊಂದು ತಿಂಗಳಿಂದ ಕೆಲವೊಂದು ಗ್ರಾಮಗಳಲ್ಲಿ ಚಿಕೂನ್‌ಗುನ್ಯಾ, ಎಚ್‌1ಎನ್‌1, ಡೆಂಘೀನಂತಹ ರೋಗಗಳು ತಾಲೂಕಿನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ತಾಲೂಕು ಆಸ್ಪತ್ರೆಗೆ ನಿತ್ಯ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಆದರೆ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿಯುತ ಜನಪ್ರತಿನಿ ಧಿಗಳು, ಇದು ನಮಗೆ ಸಂಬಂಧವಿಲ್ಲ ಎಂಬಂತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸರ್ಕಾರವೇ ರೂಪಿಸಿರುವ ನಿಯಮಾನುಸಾರ ಈ ಆಸ್ಪತ್ರೆಯಲ್ಲಿ 12ರಿಂದ 15 ವಿವಿಧ ತಜ್ಞ ವೈದ್ಯರು ಸೇವೆಯಲ್ಲಿರಬೇಕು. ಆದರೆ, ಹೆರಿಗೆ, ದಂತ, ಎಲಬು ಮತ್ತು ಕೀಲು ತಜ್ಞ ವೈದ್ಯರು ಬಿಟ್ಟರೆ ಬೇರೆ ವೈದ್ಯರಿಲ್ಲ. ಮುಖ್ಯವಾಗಿ ಮಕ್ಕಳ ತಜ್ಞ, ನೇತ್ರ ತಜ್ಞ, ಹೃದಯರೋಗ ಮತ್ತು ಮಧುಮೇಹ ತಜ್ಞರ ಅವಶ್ಯಕತೆ ಹೆಚ್ಚಿದ್ದು, ಈ ತಜ್ಞ ವೈದ್ಯರು ಇಲ್ಲ. ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್‌ ಡಾಕ್ಟರ್‌ ಮತ್ತು ಚೀಫ್‌ ಮೆಡಿಕಲ್‌ ಆಫೀಸರ್‌ ಕೂಡ ಲಭ್ಯವಿಲ್ಲದಿರುವುದು ದುರಂತ. ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 50 ಇದ್ದು ಆಗಾಗ ಅಪಘಾತ ಸಂಭವಿಸಿ ತಾಲೂಕು ಆಸ್ಪತ್ರೆಗೆ ದಾಖಲಾದರೆ ಅವರಿಗೆ ತುರ್ತು ಚಿಕಿತ್ಸೆ ನೀಡಲು ತುರ್ತು ನಿಗಾ ಘಟಕವಿದ್ದರೂ ದಿನದ 24 ಗಂಟೆ ಕಾಲ ಚಿಕಿತ್ಸೆ ನೀಡುವ ವೈದ್ಯರಿಲ್ಲದೆ ಅಪಘಾತಕ್ಕೀಡಾದವರು ಬಾಗಲಕೋಟೆಗೆ ತೆರಳಬೇಕಾದ ಅನಿವಾರ್ಯತೆ ಇದೆ. ಸ್ಥಳೀಯವಾಗಿ ಚಿಕಿತ್ಸೆ ದೊರೆಯದೇ, ಬಾಗಲಕೋಟೆಗೆ ತೆರಳುವಾಗ ಮಾರ್ಗ ಮಧ್ಯೆ ಮೃತಪಟ್ಟ ಪ್ರಕರಣ ನಡೆದಿವೆ.

ಇರುವವರೂ ಸಭೆಗೆ: ಕೆಲವೊಂದು ಸೌಲಭ್ಯ ಮತ್ತು ವಿಶೇಷವಾಗಿ ತಾಲೂಕು ವೈದ್ಯಾಧಿಕಾರಿಗಳನ್ನು ಭೇಟಿಯಾಗಲು ಬಂದರೆ ಆಸ್ಪತ್ರೆಯಲ್ಲಿ ಅವರೂ ಇರವುದಿಲ್ಲ. ಬರಿಮೀಟಿಂಗ್‌ ಹೋಗಿದ್ದಾರೆ ಎಂಬ ಪದ ನಿತ್ಯ ಕೇಳುವ ಪರಿಸ್ಥಿತಿ ಇದೆ. ಆರೋಗ್ಯ ಸಚಿವರೇ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಉಸ್ತುವಾರಿ ಸಚಿವರ ತವರಲ್ಲೇ 100 ಹಾಸಿಗೆ ತಾಲೂಕು ಆಸ್ಪತ್ರೆಯ ಪರಿಸ್ಥಿತಿ ಹೀಗಾದರೆ, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಅಯೋಮಯ ಎನ್ನುವಂತಾಗಿದೆ.

ಆಸ್ಪತ್ರೆಯಲ್ಲಿ ಸ್ವಚ್ಛತೆ ಕೇಳಬೇಡಿ: 
ಆಸ್ಪತ್ರೆಗಳೆಂದರೆ ಸ್ವಚ್ಛತೆ ಇರಬೇಕು. ನೈರ್ಮಲ್ಯವಿಲ್ಲದಿದ್ದರೆ ಹಲವು ಕಾಯಿಲೆ ಬರುತ್ತವೆ ಎಂದು ಸ್ವತಃ ವೈದ್ಯರೇ ಹೇಳುತ್ತಾರೆ. ಆದರೆ, ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಂಜೆಯಾದರೆ ಸೊಳ್ಳೆಯ ಕಾಟ. ಸಣ್ಣ ಕಾಯಿಲೆಯಿಂದ ಬಂದ ರೋಗಿ ಇಲ್ಲಿ ಒಳ ರೋಗಿಯಾಗಿ ಒಂದೇ ದಿನ ದಾಖಲಾಗಿದ್ದರೂ ಆತ ಮತ್ತೂಂದು ರೋಗಕ್ಕೆ ತುತ್ತಾಗುವ ಅನಾಹುತವೇ ಹೆಚ್ಚು ಎಂಬ ಮಾತು ರೋಗಿಗಳಿಂದ ಕೇಳಿ ಬರುತ್ತಿದೆ.

Advertisement

ಕೋಟಿ ಕೋಟಿ ಮೊತ್ತದ ಉಪಕರಣ: ತಾಲೂಕಿನ ಬಡ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೋಟಿ ಕೋಟಿ ವೆಚ್ಚದ ಹಲವು ವೈದ್ಯಕೀಯ ಯಂತ್ರಗಳು ಇಲ್ಲಿವೆ. ಆದರೆ, ಅವುಗಳ ಬಳಕೆಯೇ ಆಗುತ್ತಿಲ್ಲ. ಹೀಗಾಗಿ ಸರ್ಕಾರ ನೀಡಿದ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಆಸ್ಪತ್ರೆಯಲ್ಲಿ ಎಕ್ಸರೆ, ಡಯಾಲಿಸಿಸ್‌, ತುರ್ತು ನಿಗಾ ಘಟಕ, ಐಸಿಯು, ಇಸಿಜಿ ಸೇರಿದಂತೆ ಹಲವಾರು ವೈದ್ಯಕೀಯ ಉಪಕರಣಗಳಿವೆ. ಅವುಗಳನ್ನು ಬಳಸಿ, ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ. ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, 100 ಹಾಸಿಗೆ ಹುನಗುಂದ ತಾಲೂಕು ಆಸ್ಪತ್ರೆಯ ಅವ್ಯವಸ್ಥೆಗೆ ಚಿಕಿತ್ಸೆ ಕೊಡಲು ಮುಂದಾಗಬೇಕಿದೆ.

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಯಾವ ವೈದ್ಯರು ಈ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ.
 ಡಾ| ಕುಸುಮಾಮಾಗಿ,
ತಾಲೂಕು ವೈದ್ಯಾಧಿಕಾರಿ

ಬಡ ರೋಗಿಗಳಿಗೆ ಅನೂಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆ ಇದೆ. ಕೋಟ್ಯಂತರ ಮೊತ್ತದ ವೈದ್ಯಕೀಯ ಉಪಕರಣಗಳೂ ಇವೆ. ಉಚಿತ ಚಿಕಿತ್ಸೆ ದೊರೆಯುತ್ತದೆ ಎಂಬ ವಿಶ್ವಾಸದಿಂದ ಬರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಯಾವಾಗ ಬಂದರೂ ವೈದ್ಯರು ಇರುವುದಿಲ್ಲ. ಬಡವರ ಸಮಸ್ಯೆ ಯಾರೂ ಕೇಳುವುದಿಲ್ಲವೇ ?
 ಗೌರಮ್ಮ ಕುಂಬಾರ, ಸ್ಥಳೀಯರು

ಮಲ್ಲಿಕಾರ್ಜುನ ಬಂಡರಗಲ್ಲ 

Advertisement

Udayavani is now on Telegram. Click here to join our channel and stay updated with the latest news.

Next