ಬೆಂಗಳೂರು: ಹಣ ಪಡೆದು ಕಾರು ಕೊಡಿಸದೆ ವಂಚಿಸಿದ್ದ ಕಾರು ಡೀಲರ್‌ನನ್ನು ಅಪಹರಿಸಿದ ಪ್ರಕರಣ ಸಂಬಂಧ ರೌಡಿಶೀಟರ್ ಸೇರಿ ಐವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಠಾಣೆಯ ರೌಡಿಶೀಟರ್ ನಾಗ ಅಲಿಯಾಸ್ ಗೆಡ್ಡೆ ನಾಗರಾಜ್, ಈತನ ಸಹಚರರಾದ ಪ್ರಕಾಶ್, ರಘು, ಮುನಿರಾಜು ಬಂಧಿತರು.
ಅಪಹರಣಕ್ಕೆ ಒಳಗಾಗಿದ್ದ ನವೀನ್ ಕುಮಾರ್‌ನನ್ನು ರಕ್ಷಣೆ ಮಾಡಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ 10 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಾರು ಡೀಲರ್ ಆಗಿರುವ ಕೆ.ಪಿ.ಅಗ್ರಹಾರ ನಿವಾಸಿ ನವೀನ್ ಕುಮಾರ್‌ನನ್ನು ಭೇಟಿಯಾಗಿದ್ದ ರೌಡಿ ನಾಗ, ಫಾರ್ಚೂನರ್ ಕಾರು ಕೊಡಿಸುವಂತೆ ಅ.13ರಂದು 25 ಲಕ್ಷ ರೂ. ಹಣ ನೀಡಿದ್ದ. ಆದರೆ ಹಣ ಪಡೆದ ನವೀನ್, ತಿಂಗಳಾದರೂ ಕಾರು ಕೊಡಿಸಿರಲಿಲ್ಲ.
ಈ ಬಗ್ಗೆ ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಅಲ್ಲದೆ ಈ ಹಿಂದೆ ಕಾರು ಕೊಡಿಸುವುದಾಗಿ ಹಲವರಿಂದ ಮುಂಗಡ ಹಣ ಪಡೆದಿದ್ದ ನವೀನ್ ವಂಚನೆ ಮಾಡಿದ್ದ. ಈ ಸಂಬಂಧ ಚಂದ್ರಲೇಔಟ್ ಮತ್ತು ಮಾಗಡಿ ರಸ್ತೆ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿವೆ. ಈ ವಿಷಯ ತಿಳಿದ ನಾಗರಾಜ್, ಹಣ ವಸೂಲಿಗಾಗಿ ಆತನನ್ನು ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲೇ ಪ್ಲಾನ್: ಕಾರು ಖರೀದಿ ಕುರಿತು ಮಾತನಾಡಲು ಅ.25ರಂದು ಗುರುವಾರ ಸಂಜೆ ಮಾಗಡಿ ರಸ್ತೆಯ ರೈಲ್ವೆ ಕಾಲೋನಿ ಬಳಿ ನವೀನ್‌ನನ್ನು ಆರೋಪಿಗಳು ಕರೆಸಿಕೊಂಡಿದ್ದಾರೆ. ನಂತರ ಕಾರು ಹತ್ತಿಸಿಕೊಂಡು, ರಾಮಮೂರ್ತಿನಗರದ ವಿವಾದಿತ ಶೆಡ್‌ನಲ್ಲಿ ಕೂಡಿ ಹಾಕಿ, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಥಳಿಸಿದ್ದಾರೆ.
ಇತ್ತ ತಡರಾತ್ರಿಯಾದರೂ ಪತಿ ಮನೆಗೆ ಬಾರದ್ದರಿಂದ ಗಾಬರಿಗೊಂಡ ನವೀನ್ ಪತ್ನಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ನವೀನ್ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ಆರೋಪಿ ನಾಗರಾಜ್ ಮೊಬೈಲ್‌ನಿಂದ ಕೊನೆಯ ಕರೆ ಬಂದಿರುವುದು ತಿಳಿದಿದೆ.
ಅನಂತರ ನಾಗರಾಜ್‌ನ ಮೊಬೈಲ್ ನೆಟ್‌ವರ್ಕ್ ಹಿಂಬಾಲಿಸಿದಾಗ ಅಪಹರಣ ಕೃತ್ಯ ಪತ್ತೆಯಾಗಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅ.26ರಂದು ಖಾತೆಯಿಂದ ಹಣ ಪಡೆಯಲು ವಿಜಯನಗರದ ಆಕ್ಸಿಸ್ ಬ್ಯಾಂಕ್ ಬಳಿ ನವೀನ್‌ನನ್ನು ಕರೆತಂದಿದ್ದಾಗ ಆರೋಪಿಗಳನ್ನು ಬಂಧಿಸಿದ್ದಾರೆ.