Advertisement

ವಿಷಾನಿಲ ಸೇವಿಸಿ ಮೂವರು ಸಾವು

05:27 PM Jul 12, 2018 | Team Udayavani |

ಕನಕಪುರ: ಬಾಯ್ಲರ್‌ ಸ್ವತ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಆಂಥ್ಯಾಮ್‌ ಬಯೋಸೈನ್‌ ಕಾರ್ಖಾನೆಯಲ್ಲಿ ಸಂಭವಿಸಿದೆ.

Advertisement

ಕನಕಪುರ ತಾಲೂಕು ಗೊಟ್ಟಿಗೆಹಳ್ಳಿ ನಿವಾಸಿ ಮಹೇಶ್‌, ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಲೋಕೇಶ, ತಮಿಳುನಾಡು ರಾಜ್ಯದ ಶರವಣ ಮೃತ ಪಟ್ಟಿರುವ ಕಾರ್ಮಿಕರು. ತಮಿಳು ನಾಡು ಮೂಲದ ಮತ್ತೂಬ್ಬ ಕಾರ್ಮಿಕ ಹರಿಲಿಘನ್‌ ತೀವ್ರ ಅಸ್ವಸ್ಥಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ. ಇವರೆಲ್ಲರು ನಿರ್ವಹಣಾ
ವಿಭಾಗದ ಸಿಬ್ಬಂದಿ ಎಂದು ಹೇಳಲಾಗಿದೆ.

ಮಂಗಳವಾರ ತಡರಾತ್ರಿ ಘಟನೆ: ಆಂಥ್ಯಾಮ್‌ ಬಯೋಸೈನ್‌ ಕಾರ್ಖಾನೆಯು ಔಷಧಿ ತಯಾರಿಸುತ್ತದೆ. ಕಾರ್ಖಾನೆಯಲ್ಲಿದ್ದ ಬಾಯ್ಲರ್‌ನ ಸ್ವತ್ಛತೆಗೆಂದು ಮಂಗಳವಾರ ತಡರಾತ್ರಿ ನಾಲ್ಕು ಮಂದಿ ಕಾರ್ಮಿಕರು ಇಳಿದಿದ್ದಾರೆ. ಕೆಲ ಹೊತ್ತಿನಲ್ಲಿಯೇ ಆಮ್ಲಜನಕದ ಕೊರತೆಯಿಂದಾಗಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ಇತರೆ ಕಾರ್ಮಿಕರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಮೂವರು ಮೃತಪಟ್ಟಿದ್ದರು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮತ್ತೂಬ್ಬ ಕಾರ್ಮಿಕನನ್ನು ರಕ್ಷಿಸಿ ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಸಿಬ್ಬಂದಿಯನ್ನು ಬಾಯ್ಲರ್‌ನ ಒಳಗೆ ಇಳಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಹಾರೋಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ನಿರ್ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅಧಿಕಾರಿಗಳ ಪ್ರವೇಶಕ್ಕೆ ತಡೆ : ಅವಘಡದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಕೈಗೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಲೋಕೇಶ್‌ ಕಾರ್ಖಾನೆಗೆಂದು ಬಂದರು, ತಾವು ಅಧಿಕಾರಿ ಎಂದು ಹೇಳಿದರು. ಸಕ್ಯೂರಿಟಿ ಸಿಬ್ಬಂದಿ ಅವರನ್ನು ಗೇಟ್‌ ಬಳಿಯಲ್ಲೇ ತಡೆದರು. ಅರ್ಧ ಗಂಟೆಯ ನಂತರ ಅಧಿಕಾರಿಗಳನ್ನು ಕಾರ್ಖಾನೆಯ ಒಳಗಡೆ ಬಿಡಲಾಯಿತು. ಘಟನೆಯ ತಿಳಿದ ಕೂಡಲೇ ಎಸ್ಪಿ ರಮೇಶ್‌, ಡಿವೈಎಸ್ಪಿ ಎಂ.ಕೆ. ತಮ್ಮಯ್ಯ, ಕಾರ್ಮಿಕ ಅಧಿಕಾರಿ ಯತೀಶ್‌ ಕಾರ್ಖಾನೆಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದ್ದಾರೆ.

Advertisement

ಕಾರ್ಮಿಕರ ಜೀವಕ್ಕಿಲ್ಲ ಬೆಲೆ : ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳಲ್ಲಿ ಹತ್ತಾರು ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಪದೇ ಪದೆ ಸಂಭವಿಸುತ್ತಿವೆ. ಆರು ತಿಂಗಳ ಹಿಂದೆ ಪ್ಯಾಕೇಜಿಂಗ್‌ ಘಟಕದಲ್ಲಿ ನೀರಿನ ಸಂಪ್‌ ಸ್ವತ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಬಹುತೇಕ ಘಟನೆಗಳು ಆಡಳಿತ ಮಂಡಳಿಯ ನಿರ್ಲಕ್ಷದಿಂದಾಗಿಯೇ ಸಂಭವಿಸುತ್ತಿವೆ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ವಿವಿಧ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಪ್ರತಿಕ್ರಿಯಿಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು
ತೆಗೆದುಕೊಳ್ಳದೆ ಕಾರ್ಮಿಕರನ್ನು ಹೀಗೆ ಅಪಾಯಕಾರಿ ಕೆಲಸಕ್ಕೆ ಹಚ್ಚುತ್ತಿರುವುದರ ಬಗ್ಗೆ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕವಾಗಿ ಹೆಚ್ಚು ಮಾಹಿತಿ ಇರದ ತಮ್ಮಂತಹ ಬಡಪಾಯಿ ಕಾರ್ಮಿಕರಿಗೆ ಅಗತ್ಯ ಸಲಕರಣೆಗಳನ್ನು ಕೊಡದ ಕಾರಣ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next