ಚಿಂಚೋಳಿ: ತಾಲೂಕಿನ ಪಸ್ತಪುರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ಎದೆ ನೋವಿನಿಂದಾಗಿ ಮೂವರು ಮೃತಪಟ್ಟಿದ್ದಾರೆ. ತಂಬಾಕು ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದರೂ “ಎದೆಭಾಗದಲ್ಲಿ ಸುಟ್ಟುಕೊಂಡರೆ ನೋವು ಬರುವುದಿಲ್ಲ’ವೆಂಬ ಮೂಢನಂಬಿಕೆಯಿಂದ 12 ಜನ ಎದೆ ಸುಟ್ಟುಕೊಂಡಿದ್ದಾರೆ.
ಗ್ರಾಮದಲ್ಲಿ ಕೆಲವು ದಿನಗಳಿಂದ ಜನರಲ್ಲಿ ಕಾಣಿಸಿಕೊಂಡ ಎದೆನೋವಿನಿಂದಾಗಿ ಹಣುಮಂತ ಗುಂಡಪ್ಪ ಪೂಜಾರಿ,
ಹಣುಮಂತರಾವ್ ಚಂದ್ರಪ್ಪ ಪೂಜಾರಿ, ರೇವಣಸಿದ್ದಪ್ಪ ಬಕ್ಕಪ್ಪ ಹಡಪದ ಎಂಬುವರು ಒಂದೇ ವಾರದಲ್ಲಿ ಮೃತಪಟ್ಟಿದ್ದಾರೆ. ರೇವಣಸಿದ್ದಪ್ಪ ಬಸವಣ್ಣಪ್ಪ ಸೊಲ್ಲಾಪುರ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 12 ಜನರಿಗೆ ಎದೆನೋವು ಕಾಣಿಸಿಕೊಂಡಾಗ ಅವರು ಭಯಭೀತರಾಗಿ ಎದೆ ಸುಟ್ಟುಕೊಂಡಿದ್ದಾರೆ ಎಂದು ಗ್ರಾಮಸ್ಥ ಕಲ್ಲಪ್ಪ ಅಧಿಕಾರಿಗಳಿಗೆ ತಿಳಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್, ಡಿಎಚ್‌ಒ ಡಾ. ಶಿವರಾಜ ಸಜ್ಜನಶೆಟ್ಟಿ ಪಸ್ತಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಗ್ರಾಮದ ಪ್ರತಿಯೊಬ್ಬರ ಮನೆಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದೇವೆ. ತಂಬಾಕು, ಮದ್ಯಸೇವನೆ, ರಕ್ತದೊತ್ತಡದಿಂದ ಆರೋಗ್ಯದಲ್ಲಿ ಏರುಪೇರು ಆಗಿ ಮೂವರು ಮೃತಪಟ್ಟಿದ್ದಾರೆ. ಮೌಡ್ಯದಿಂದ ಯಾರೂ ಎದೆಸುಟ್ಟುಕೊಳ್ಳ ಬೇಡಿ ಎಂದು ಅರಿವು ಮೂಡಿಸಿರುವುದಾಗಿ ತಿಳಿಸಿದರು.