ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿನ 13 ಕೋವಿಡ್-19 ವೈರಸ್ ಸೋಂಕಿತರ ಪೈಕಿ ಹೊಸಪೇಟೆಯ ಮೂವರು ಸೋಂಕಿತರನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿದರು.
ಹೊಸಪೇಟೆ ನಗರದ ಎಸ್.ಆರ್.ನಗರದ ಒಂದೇ ಕುಟುಂಬದ 11 ಜನರಲ್ಲಿ ಕೋವಿಡ್ 19 ಪತ್ತೆಯಾಗಿದ್ದು, ಈ ಪೈಕಿ ಮಾ.30 ರಂದು ದೃಢಪಟ್ಟಿದ್ದ ಪಿ.89, ಪಿ.91, 141 ಸೋಂಕಿತರು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಹಿನ್ನೆಲೆಯಲ್ಲಿ ಈ ಮೂವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯಾಧಿಕಾರಿ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರತಜ್ಞ ಡಾ.ಬಸಾರೆಡ್ಡಿ, ತಹಶೀಲ್ದಾರ್ ಯು.ನಾಗರಾಜ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಅವರು ಹೂಗುಚ್ಛ, ಸಿಹಿ ತಿನಿಸು, ಸಸಿಗಳನ್ನು ನೀಡಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಪಿ.91 ರೋಗಿ ಮಾತನಾಡಿ, ಕಳೆದ ಮಾರ್ಚ್ 25 ರಂದು ಶಂಕಿತ ಕೋವಿಡ್ 19 ನಿಂದ ನಮ್ಮನ್ನು ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಕೋವಿಡ್ 19 ಪಾಸಿಟಿವ್ ಇದೆ ಎಂದಾಕ್ಷಣ ಮೊದಲು ಭಯ, ಆತಂಕ ನಮ್ಮನ್ನು ಕಾಡಿತು. ಆದರೆ, ಆಸ್ಪತ್ರೆಯಲ್ಲಿನ ವೈದ್ಯರು, ಸಿಬ್ಬಂದಿಗಳು ಅಧಿಕಾರಿಗಳು ನಮ್ಮನ್ನು ಉತ್ತಮವಾಗಿ ನೋಡಿಕೊಂಡರು. ಇದರಿಂದ ನಮಗೆ ಧೈರ್ಯ ಬಂತು. ಇದರಿಂದ ಯಾರು ಭಯ ಪಡುವ ಅಗತ್ಯವಿಲ್ಲ. ಆದರೆ, ನಿರ್ಲಕ್ಷ್ಯ ವಹಿಸುವುದು ಬೇಡ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸಾರೆಡ್ಡಿ ಮಾತನಾಡಿ, ಕೋವಿಡ್-19 ವೈರಸ್ ಇತರರಿಗೆ ಹರಡುವ ಹಿನ್ನೆಲೆಯಲ್ಲಿ ಇದನ್ನು ನಿರ್ಲಕ್ಷಿಸುವಂತಿಲ್ಲ. ಮೇಲಾಗಿ ಸೋಂಕಿತ ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಬೇಗ ಗುಣಮುಖರಾಗಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ್, ಡಾ.ಮರಿಯಂಬಿ, ಡಾ.ಅನೀಲ್ ಕುಮಾರ್, ಡಾ.ಇಂದ್ರಾಣಿ, ಶುಶ್ರೂಷಕಿ ಅಧೀಕ್ಷಕಿ ಶಾತಾಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.