Advertisement

ಶ್ರಾವಣ ಸಂಗೀತಧಾರೆಯಲ್ಲಿ ಮೂರು ಕಛೇರಿ 

06:00 AM Nov 02, 2018 | |

ರಜತೋತ್ಸವ ಸಂಭ್ರಮದಲ್ಲಿರುವ ಸಂಗೀತ ಪರಿಷತ್‌ ಮಂಗಳೂರು ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಿದ ಶ್ರಾವಣ ಸಂಗೀತೋತ್ಸವದಲ್ಲಿ ಮೂರು ಕಛೇರಿಗಳನ್ನು ಏರ್ಪಡಿಸಲಾಗಿತ್ತು. 

Advertisement

ಮೊದಲನೆಯದಾಗಿ ಅರ್ಚನಾ ಕೋವಿಲಾಡಿಯವರು ಬೇಗಡೆ ವರ್ಣದೊಂದಿಗೆ ಕಛೇರಿಯನ್ನು ಆರಂಭಿಸಿ, ಮೃದು ಹಾಗೂ ಮಧುರವಾದ ಶಾರೀರದಿಂದ ಶ್ರೋತೃಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಚಂದ್ರಜ್ಯೋತಿ ರಾಗದ ಕಿರು ಆಲಾಪನೆಯೊಂದಿಗೆ ಕಛೇರಿಯನ್ನು ಮುಂದುವರಿಸಿದ ಅರ್ಚನಾರವರು ತ್ಯಾಗರಾಜರ ಬಾಗಾಯನಯ್ಯ ಕೃತಿಯನ್ನು ಹಾಡಿದರು. ನಂತರ ಕಮಾಚ್‌ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಸಂತಾನಗೋಪಾಲಕೃಷ್ಣಂ ಉಪಾಸ್ಮಹೇ ಕೃತಿಯನ್ನು ಉತ್ತಮ ನೆರವಲ್‌ ಹಾಗೂ ಸ್ವರಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ತ್ಯಾಗರಾಜರ ಪಂತುವರಾಳಿರಾಗದ ಸುಂದರತರ ದೇಹಂ ವಂದೇಹಂ ರಾಮಂ ಕೃತಿಯನ್ನು ಕ್ಷಿಪ್ರಗತಿಯಲ್ಲಿ ಪ್ರಸ್ತುತಪಡಿಸಿ, ತೋಡಿರಾಗದ ವಿಸ್ತಾರವಾದ ಆಲಾಪನೆಯೊಂದಿಗೆ ತ್ಯಾಗರಾಜರ ಕದ್ದನುವಾರಿಕಿ ಕೃತಿಯನ್ನು ಉತ್ತಮವಾದ ನೆರವಲ್‌ ಹಾಗೂ ಸ್ವರಪ್ರಸ್ತಾರದೊಂದಿಗೆ ಸುಂದರವಾಗಿ ಹಾಡಿದರು. ರಾಗ ನಳಿನಕಾಂತಿಯಲ್ಲಿ ರಾಗಂ ತಾನಂ ಪಲ್ಲವಿಯನ್ನು ಕ್ಸಿಪ್ರವಾಗಿ ಹಾಗೂ ಮನೋಜ್ಞವಾಗಿ ಚಿತ್ರಿಸಿದರು. 

ಪುರಂದರದಾಸರ ಏಕೆ ಕಡೆಗಣ್ಣಿಂದ ನೋಡುವೆಯನ್ನು ಹೃದಯಸ್ಪರ್ಶಿಯಾದ ಶುಭಪಂತುವರಾಳಿಯಲ್ಲಿ ನಿರೂಪಿಸಿದ ಅರ್ಚನಾ ಸಿಂಧುಭೈರವಿಯ ಭವಾನಿ ಭಜನೆಯೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ಪಿಟೀಲು ಪಕ್ಕವಾದ್ಯದಲ್ಲಿ ಅಚ್ಯುತ ರಾವ್‌, ಮೃದಂಗದಲ್ಲಿ ಎ.ಎಸ್‌.ಎನ್‌. ಸ್ವಾಮಿ ಹಾಗೂ ಮೋರ್ಸಿಂಗನಲ್ಲಿ ಚಿದಾನಂದ ಸಾಥ್‌ ನೀಡಿದರು. 

ಎರಡನೆಯ ಕಛೇರಿಯಲ್ಲಿ ಅಭಿರಾಮ್‌ ಭೋಡೆಯವರ ಗಾಯನವಿತ್ತು.ಸಾವೇರಿ ರಾಗದ ಕೃತಿಯೊಂದಿಗೆ ಕಛೇರಿ ಆರಂಭಿಸಿ, ಆರಭಿರಾಗದ ತ್ರಿಪುರ ಸುಂದರಿ ಕೃತಿ ಹಾಗೂ ವಾಗಧೀಶ್ವರಿಯ ಆಲಾಪನೆಯೊಂದಿಗೆ ತ್ಯಾಗರಾಜರ ಪರಮಾತುಡು ಕೃತಿಯನ್ನು ಪ್ರಸ್ತುತಪಡಿಸಿದರು. ಸ್ವಾತಿ ತಿರುನಾಳ್‌ರವರ ವರಾಳಿರಾಗದ ಕಾವಾವಾ ಕೃತಿಯ ನಂತರ ಕಛೇರಿಯ ಮುಖ್ಯರಾಗವಾಗಿ ತೋಡಿಯನ್ನು ಆರಿಸಿಕೊಂಡು, ಕಮಲೇಶವಿಠ್ಠಲದಾಸರ ಬೇಹಾಗ್‌ ರಾಗದ ಕಂಡುಧನ್ಯನಾದೆನೊ ದೇವರನಾಮದೊಂದಿಗೆ ಕಛೇರಿ ಸಂಪನ್ನಗೊಳಿಸಿ ಶೋತೃಗಳ ಮೆಚ್ಚುಗೆಗೆ ಪಾತ್ರರಾದರು. ಅನಿರುದ್ಧ್ ಭಾರದ್ವಾಜ್‌ ಪಿಟೀಲಿನಲ್ಲಿ, ಅದಮ್ಯ ರಮಾನಂದ ಮೃದಂಗದಲ್ಲಿ ಹಾಗೂ ಶರತ್‌ ಕೌಶಿಕ್‌ ಘಟಂನಲ್ಲಿ ಉತ್ತಮ ಸಹಕರಿಸಿದರು. 

ಸಂಜೆಯ ಕಛೇರಿಯನ್ನು ಆದಿತ್ಯ ಮಾಧವನ್‌ರವರು ಕಲ್ಯಾಣಿರಾಗದ ವನಜಾಕ್ಷಿ ವರ್ಣದೊಂದಿಗೆ ಆರಂಭಿಸಿ, ಮಾಯಾಮಾಳವಗೌಳದ ತ್ಯಾಗರಾಜರ ಕೃತಿ ತುಳಸೀದಳಮುಲಚೇಯನ್ನು ಹಾಡಿ ನಂತರ ಕನ್ನಡ ರಾಗದ ಆಲಾಪನೆಯೊಂದಿಗೆ ಪುರಂದರದಾಸರ ದೇವರನಾಮ ಕಂಡೆಕಂಡೆ ಸ್ವಾಮಿಯ ಬೇಡಿಕೊಂಡೆಯನ್ನು ಹಾಡಿದರು. ನಂತರ ದ್ವಿಜಾವಂತಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಚೇತಃಶ್ರೀಬಾಲಕೃಷ್ಣ ಹಾಗೂ ತ್ಯಾಗರಾಜರ ಕಾಪಿನಾರಾಯಣಿ ರಾಗದ ಸರಸ ಸಾಮ ದಾನ ಭೇದ ದಂಡ ಚತುರ ಕೃತಿಗಳನ್ನು ನಿರೂಪಿಸಿದರು.

Advertisement

ಸಾವೇರಿ ರಾಗದ ತ್ಯಾಗರಾಜರ ಕೃತಿ ರಾಮಬಾಣದೊಂದಿಗೆ ಕಛೇರಿಯನ್ನು ಮುಂದುವರಿಸಿದ ಆದಿತ್ಯರವರು ನವರಸ ಕನ್ನಡ ರಾಗದ ದೀರ್ಘ‌ ಆಲಾಪನೆಯೊಂದಿಗೆ ಸ್ವಾತಿ ತಿರುನಾಳ್‌ ಮಹಾರಾಜರ ವಂದೇ ಸದಾ ಪದ್ಮನಾಭಂ ಕೃತಿಯನ್ನು ಉತ್ತಮ ನೆರವಲ್‌ ಹಾಗೂ ಸ್ವರ ಪ್ರಸ್ತಾರಗಳೊಂದಿಗೆ ಪ್ರಸ್ತುತಪಡಿಸಿದರು.ಖರಹರಪ್ರಿಯ ರಾಗದಲ್ಲಿ ರಾಗಂ ತಾನಂ ಪಲ್ಲವಿಯನ್ನು ಸೊಗಸಾಗಿ ನಿರ್ವಹಿಸಿ ಪಲ್ಲವಿಯಲ್ಲಿ ರಾಗಮಾಲಿಕೆಯ ಸೊಬಗನ್ನು ಉಣಬಡಿಸಿದರು.ರಾಗ ಬೇಹಾಗ್‌ನ್ನೇ ಮುಂದುವರಿಸಿ ಪರಿಪಾಲಯಮಾಂ ನಿರೂಪಿಸಿದ ಆದಿತ್ಯರವರು ಅಪರೂಪದ ಮಧುಮಾಲತಿ ರಾಗದಲ್ಲಿ ಪುರಂದರದಾಸರ ಬೃಂದಾವನದೊಳು ಆಡುವನ್ಯಾರೆ ದೇವರನಾಮದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ವಿಠ್ಠಲ್‌ ರಂಗನ್‌, ಮೃದಂಗದಲ್ಲಿ ನಿಕ್ಷಿತ್‌ ಹಾಗೂ ಘಟಂನಲ್ಲಿ ಶರತ್‌ ಕೌಶಿಕ್‌ ಸಹಕರಿಸಿದರು. 

 ಬೇಲೂರು ಶ್ರೀಧರ್‌

Advertisement

Udayavani is now on Telegram. Click here to join our channel and stay updated with the latest news.

Next