ಪಣಜಿ: ಗೋವಾದಲ್ಲಿ ನಡೆಯುತ್ತಿರುವ 37 ನೇ ರಾಷ್ಟ್ರೀಯ ಕ್ರೀಡಾಕೂಟದ ಪ್ತತ್ಯೇಕ ಘಟನೆಗಳಲ್ಲಿ ಗುರುವಾರ 3 ಕ್ರೀಡಾಪಟುಗಳು ಗಾಯಗೊಂಡಿದ್ದಾರೆ. ಸದ್ಯ ಅವರು ಬಾಂಬೋಲಿಯಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ರಗ್ಬಿ ಆಟಗಾರರು ಮತ್ತು ಒಬ್ಬರು ವೇಟ್‍ಲಿಫ್ಟರ್ ಆಗಿದ್ದಾರೆ ಎಂದು ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ರಗ್ಬಿ ತಂಡದ ಆಟಗಾರ ಭರತ್ ಚೌಹಾಣ್ (27) ಗಾಯಗೊಂಡಿದ್ದಾರೆ. ನಂತರ ಅವರನ್ನು ಪಣಜಿ ಬಳಿಯ ಸರ್ಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಗೋವಾದ ರಗ್ಬಿ ಆಟಗಾರ ಸೋಹನ್ ಶಿರೋಡ್ಕರ್ (25) ಕೂಡ ಆಟವಾಡುವಾಗ ಗಾಯಗೊಂಡಿದ್ದು, ಬುಧವಾರ ರಾತ್ರಿ ಜಿಎಂಸಿಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇರಳ ತಂಡದ ವೇಟ್‍ಲಿಫ್ಟರ್ ಬಿಸ್ವಾ ವರ್ಗುಸ್ (26) ಅವರನ್ನು ಗಾಯದ ಕಾರಣ ಮಂಗಳವಾರ ಜಿಎಂಸಿಎಚ್‍ಗೆ ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರ ಗೋವಾ ಕ್ರೀಡಾ ಸಚಿವ ಗೋವಿಂದ್ ಗಾವ್ಡೆ ಅವರು ಗಾಯಗೊಂಡಿರುವ ಈ ಮೂವರು ಅಥ್ಲೀಟ್‍ಗಳನ್ನು ಭೇಟಿಯಾದರು.
ಅವರೊಂದಿಗೆ ಸಂವಾದ ನಡೆಸಿದರು. ಈ ಆಟಗಾರರು ಮತ್ತೆ ಆರೋಗ್ಯವಾಗಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗಾವಡೆ, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಜಿಎಂಸಿ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಿದೆ. ರಾಜ್ಯ ಸರ್ಕಾರ ಎಲ್ಲ ಆಟಗಾರರ ರಕ್ಷಣೆ ಮಾಡಲಿದೆ. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗಾಗಿ ಜಿಎಂಸಿಯಲ್ಲಿ ವಿಶೇಷ ವಾರ್ಡ್ ಅನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: Cricket World Cup; ಲಂಕಾ ದಾಳಿಗೆ ಬೆದರಿದ ಇಂಗ್ಲೆಂಡ್; 156 ರನ್ ಗೆ ಆಲೌಟಾದ ಬಟ್ಲರ್ ಪಡೆ