Advertisement

ಮೂವರ ಬಂಧನ: 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

01:26 PM Mar 18, 2017 | Team Udayavani |

ದಾವಣಗೆರೆ: ಮೂವರು ಅಂತರ ಜಿಲ್ಲಾ ಮನೆಗಳ್ಳರನ್ನು ಬಂಧಿಸಿರುವ ಕೆಟಿಜೆ ನಗರ ಪೊಲೀಸರು, ಅವರಿಂದ 7.5 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಚನ್ನಗಿರಿ ತಾಲೂಕು ಸಂತೇಬೆನ್ನೂರು ಸಮೀಪದ ಚಿಕ್ಕಬ್ಬಿಗೆರೆ ಗ್ರಾಮದ ತಿಪ್ಪೇಶ ಅಲಿಯಾಸ್‌ ಕೆಪ್ಪ ತಿಪ್ಪ ಅಲಿಯಾಸ್‌ ಯುವರಾಜ್‌ ಅಲಿಯಾಸ್‌ ಕುಲ್ಡ ತಿಪ್ಪಣ್ಣ (40), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದ ರಂಗಪ್ಪ (40), ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಪನಹಳ್ಳಿ ಗ್ರಾಮದ ಸೈಯದ್‌ ಬಾಷಾ ಅಲಿಯಾಸ್‌ ಬಾಷಾ ಹಾಗೂ ಕದ್ದ ಮಾಲು ಖರೀದಿಸುತ್ತಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಗಂಗಾಧರ ಅಲಿಯಾಸ್‌ ಮುಕ್ಕಣ್ಣೇಶ್ವರ ಬಂಧಿತ ಆರೋಪಿಗಳು. 

ಕಳೆದ ಮಂಗಳವಾರ (ಮಾ.7) ಜಯದೇವ ಸರ್ಕಲ್‌ನಲ್ಲಿ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ಬಂಗಾರ ಮತ್ತು ಬೆಳ್ಳಿಯ ಆಭರಣ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಕೆಟಿಜೆ ನಗರ ಪಿಎಸ್‌ಐ ರಾಜು ಸಿಬ್ಬಂದಿಯೊಂದಿಗೆತೆರಳಿ, ತಿಪ್ಪೇಶ ಅಲಿಯಾಸ್‌ ಕೆಪ್ಪ ತಿಪ್ಪ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮನೆಗಳ್ಳತನ ಬಯಲಿಗೆ ಬಂದಿವೆ.

ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಲ್ಲಾ ಬಂಧಿತರು ಕಳೆದ ಮೂರು ವರ್ಷದಲ್ಲಿ ದಾವಣಗೆರೆ ನಗರದ ಕೆಟಿಜೆ ನಗರ, ವಿದ್ಯಾನಗರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆ ಮನೆ ಬೀಗ ಮುರಿದು ಬಂಗಾರದ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದು ವಿಚಾರಣೆ ವೇಳೆ ಗೊತ್ತಾಗಿದೆ.

ಕೆಟಿಜೆ ನಗರ ಠಾಣೆಯ 6, ವಿದ್ಯಾನಗರದ 1 ಮನೆಗಳ್ಳತನಕ್ಕೆ ಸಂಬಂಧಿಸಿದಂತೆ 236 ಗ್ರಾಂ ಬಂಗಾರದ ಆಭರಣ, 2.680 ಕೆಜಿ ಬೆಳ್ಳಿ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ತಿಪ್ಪೇಶ ಅಲಿಯಾಸ್‌ ಕೆಪ್ಪ ತಿಪ್ಪ ವಿರುದ್ಧ ಕೆಟಿಜೆ ನಗರ, ಚನ್ನಗಿರಿ, ಸಂತೇಬೆನ್ನೂರು, ಜಮಖಂಡಿ, ಬನವಾಸಿ, ಅಜ್ಜಂಪುರ ಮತ್ತು ಹೊಳಲ್ಕೆರೆ ಪೊಲೀಸ್‌ ಠಾಣೆಗಳಲ್ಲಿ ತಲಾ 1, ಗುಬ್ಬಿ ಪೊಲೀಸ್‌ ಠಾಣೆಯಲ್ಲಿ 2, ಹಿರೇಕೆರೂರು ಪೊಲೀಸ್‌ ಠಾಣೆಗಳಲ್ಲಿ 4 ಒಳಗೊಂಡಂತೆ ಒಟ್ಟು 13 ಪ್ರಕರಣ ದಾಖಲಾಗಿವೆ. 

Advertisement

2014ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ. ಎಲ್ಲಾ ಕೆಲವು ಠಾಣೆಗಳಲ್ಲಿ ಬಂಧನದ ವಾರೆಂಟ್‌ ಇದೆ ಎಂದು ತಿಳಿಸಿದರು. ನಗರ ಉಪ ವಿಭಾಗದ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್‌ ಮಾರ್ಗದರ್ಶನ, ಕೇಂದ್ರ ವೃತ್ತ ನಿರೀಕ್ಷಕ ಜಿ.ಆರ್‌. ಸಂಗನಾಥ್‌  ನೇತೃತ್ವದಲ್ಲಿ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕೆಟಿಜೆ ನಗರ ಪಿಎಸ್‌ ಐಗಳಾದ ಟಿ. ರಾಜು, ಎಸ್‌. ಪುಷ್ಪಲತಾ,

ಸಿಬ್ಬಂದಿ ಸುರೇಶ್‌ಬಾಬು, ನೂರುಲ್ಲಾಖಾನ್‌, ಜೆ.ಎಂ. ಮಂಜುನಾಥ, ಅಂಜಿನಪ್ಪ ಪೂಜಾರ್‌, ರವಿನಾಯ್ಕ, ಪರಶುರಾಮಪ್ಪ, ರಾಘವೇಂದ್ರ, ಎನ್‌.ಸಿ. ರಾಜು, ದಾದಾಪೀರ್‌, ಆನಂದ್‌ ಅವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ನಗರ ಉಪ ವಿಭಾಗದ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್‌, ಕೇಂದ್ರ ವೃತ್ತ ನಿರೀಕ್ಷಕ ಜಿ.ಆರ್‌. ಸಂಗನಾಥ್‌, ಪಿಎಸ್‌ಐಗಳಾದ ಟಿ. ರಾಜು, ಎಸ್‌. ಪುಷ್ಪಲತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next