Advertisement

ಅತ್ಯಾಚಾರವೆಸಗಿ ದರೋಡೆ ಮಾಡುತ್ತಿದ್ದ ಮೂವರ ಬಂಧನ

11:35 AM Jun 16, 2018 | Team Udayavani |

ಬೆಂಗಳೂರು: ಮದ್ಯ ವಯಸ್ಸಿನ ಮಹಿಳೆಯರನ್ನು ಪರಿಚಯಸಿಕೊಂಡು ಮೌಲ್ಯಯುತ ವಸ್ತುಗಳನ್ನು ಕೊಡಿಸುವ ನೆಪದಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಮೂವರ ತಂಡವನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಜೆ.ಕೆ.ಭರತ್‌ (24), ಮಂಡ್ಯ ಕೆ.ಆರ್‌.ಪೇಟೆ ತಾಲೂಕಿನ ಪ್ರಮೋದ್‌ (21) ಮತ್ತು ತುಮಕೂರಿನ ಕುಣಿಗಲ್‌ ತಾಲೂಕಿನ ಹರೀಶ್‌ (26) ಬಂಧಿತರು. ಆರೋಪಿಗಳು ತಮಗೆ ಪರಿಚಯವಾದ ಮಹಿಳೆಯರು ಹಾಗೂ ವೇಶ್ಯಾವಾಟಿಕೆ ನಡೆಸುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಅತ್ಯಾಚಾರವೆಸಗುತ್ತಿದ್ದರು. ಬಳಿಕ ಮಹಿಳೆಯರ ಬಳಿ ಇರುವ ನಗದು, ಚಿನ್ನ ದರೋಡೆ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಭರತ್‌ ಆಟೋ ಚಾಲಕನಾಗಿದ್ದು, ಪ್ರಮೋದ್‌ ಮತ್ತು ಹರೀಶ್‌ ಕ್ಯಾಬ್‌ ಡ್ರೈವರ್‌ಗಳಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಐಷಾರಾಮಿ ಜೀವನ ನಡೆಸುವ ಆಸೆಯಿಂದ ದರೋಡೆಗೆ ಇಳಿದಿದ್ದರು. ದೇವನಹಳ್ಳಿ, ಯಲಹಂಕ, ಮಾದನಾಯಕನಹಳ್ಳಿ ಭಾಗದಲ್ಲಿ ಪರಿಚಯವಾದ ಮಹಿಳೆಯರನ್ನು ಪುಸಲಾಯಿಸಿ, ಕೆ.ಆರ್‌.ಪೇಟೆ ಮತ್ತು ಹಾಸನದ ಹಿರೇಸಾವೆ ಭಾಗದ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿ ದರೋಡೆ ಮಾಡುತ್ತಿದ್ದರು.

ಇತ್ತೀಚೆಗೆ ತಮಗೆ ಪರಿಚಯವಾದ ಮಾದನಾಯಕನಹಳ್ಳಿಯ ಮಹಿಳೆಯನ್ನು ಆರೋಪಿ ಪ್ರಮೋದ್‌, ಇತರೆ ಆರೋಪಿಗಳ ಜತೆ ತನ್ನ ಕಾರಿನಲ್ಲಿ ಕೆ.ಆರ್‌.ಪೇಟೆ ತಾಲೂಕಿನ ಹುಬ್ಬನಹಳ್ಳಿ ಗ್ರಾಮಕ್ಕೆ ಕರೆದೊಯ್ದಿದ್ದ. ಬಳಿಕ ಹನುಮನಹಳ್ಳಿಯ ಗುಂಡ ಎಂಬಾತನೂ ಸೇರಿ ಒಟ್ಟು ನಾಲ್ವರು ಆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆ ಬಳಿಯಿದ್ದ ಮೊಬೈಲ್‌, ಚಿನ್ನದ ಸರ, ಒಂದು ಜತೆ ಓಲೆ ಕಸಿದುಕೊಂಡಿದ್ದು, ಹೀರೆಸಾವೆ ಬಸ್‌ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಯಾರೊಬ್ಬರಿಗೇ ಮಹಿಳೆ ಪರಿಚಯವಾದರೂ ಮೂವರೂ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದರು. ಬಳಿಕ ಅವರ ವೈಫ‌ಲ್ಯಗಳನ್ನು ತಿಳಿದುಕೊಂಡು ಆರೇಳು ತಿಂಗಳು ಅವರೊಂದಿಗೆ ವಾಟ್ಸ್‌ಆ್ಯಪ್‌ ಚಾಟಿಂಗ್‌, ಫೋನ್‌ ಕರೆ ಮಾಡಿ ದುಬಾರಿ ವಸ್ತುಗಳನ್ನು ಕೊಡಿಸುವ ಆಮಿಷವೊಡುತ್ತಿದ್ದರು. ನಂತರ ಒಂದು ದಿನ ನಿಗದಿ ಮಾಡಿ, ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು.

Advertisement

ಈ ಹಿಂದೆ ವೇಶ್ಯಾವಾಟಿಕೆ ನಡೆಸುವ ಮಹಿಳೆಯರನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ಹಾಸನದ ಹೀರೆಸಾವೆ ಬಳಿಯ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿ, ದರೋಡೆ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಇನ್ನು ಕೆಲ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂಬುದು ತಿಳಿದು ಬಂದಿದ್ದು. ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಬಂಧನಕ್ಕೆ ನೆರವಾದ ಸಂತ್ರಸ್ತೆ: ಸದ್ಯ ದೂರು ನೀಡಿರುವ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದ ಆಟೋ ಚಾಲಕ ಭರತ್‌, ಮತ್ತೂಮ್ಮೆ ಆಟೋ ಬೇಕಿದ್ದರೆ ಕರೆ ಮಾಡುವಂತೆ ಮೊಬೈಲ್‌ ನಂಬರ್‌ ಕೊಟ್ಟಿದ್ದ. ಬಳಿಕ ಸಂತ್ರಸ್ತೆಯನ್ನು ಕೆಲಸದ ನಿಮಿತ್ತ ಸಾಕಷ್ಟು ಬಾರಿ ಡ್ರಾಪ್‌ ಮಾಡಿದ್ದ. ಈ ಮಧ್ಯೆ ಸಂತ್ರಸ್ತೆ ಆರೋಪಿ ಬಳಿ ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನ ಬೇಕಿದೆ ಎಂದು ಕೇಳಿದ್ದರು. ಕೆಲ ದಿನಗಳ ಬಳಿಕ ಕರೆ ಮಾಡಿದ ಆರೋಪಿ ವಾಹನ ರೆಡಿಯಿದೆ,

ಹಣ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದ. ಹಾಗೇ ಇತರೆ ಸಹಚರರಿಗೆ ಈ ವಿಚಾರ ತಿಳಿಸಿದ್ದ. ನಂತರ ಆರೋಪಿ ಪ್ರಮೋದ್‌, ಮಹಿಳೆಯನ್ನು ಕಾರಿನಲ್ಲಿ ಕೆ.ಆರ್‌.ಪೇಟೆಗೆ ಕರೆದೊಯ್ದಿದ್ದು, ಮೂವರು ದೌರ್ಜನ್ಯವೆಸಗಿದ್ದರು. ಘಟನೆ ನಂತರ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ, ಆರೋಪಿ ಭರತ್‌ ನೀಡಿದ್ದ ಮೊಬೈಲ್‌ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು. ಈ ಸಂಖ್ಯೆಯ ನೆಟ್‌ವರ್ಕ್‌ ಹಾಗೂ ಮಹಿಳೆ ನೀಡಿದ ಆಟೋ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next