ಬೆಂಗಳೂರು: ವೆಬ್‌ಡಿಸೈನ್‌ನ ಹಣಕಾಸು ವಿಚಾರಕ್ಕೆ ವೆಬ್ ಡಿಸೈನರ್‌ವೊಬ್ಬನನ್ನು ಅಪಹರಿಸಿ ಲಕ್ಷಾಂತರ ರೂ. ಡ್ರಾ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ನಿವಾಸಿಗಳಾದ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿತರು.
ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಆರೋಪಿಗಳಿಂದ ಬಾಣಸವಾಡಿ ನಿವಾಸಿ ಅಜಯ್ ಪಾಂಡೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಚೈತನ್ಯ ಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿ ಹೊಂದಿದ್ದಾನೆ. ಕಂಪನಿ ವೆಬ್ ಸೈಟ್ ಸಿದ್ಧಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಅದರಂತೆ ಅಜಯ್ ವೆಬ್‌ಡಿಸೈನ್ ಮಾಡಿಕೊಟ್ಟಿದ್ದ. ಒಂದು ವರ್ಷದ ಬಳಿಕ ವೆಬ್ ನವೀಕರಣಕ್ಕೆ ಪಾಂಡೆಗೆ ಸೂಚಿಸಲಾಗಿದ್ದು, ಅದಕ್ಕೆ ಶುಲ್ಕ ನೀಡುವಂತೆ ಪಾಂಡೆ ಅವರು ಚೈತ ನ್ಯ ಬಳಿ ಬೇಡಿಕೆ ಇಟ್ಟಿದ್ದರು. ಆದರೆ, ಚೈತನ್ಯ ಹಣ ಕೊಟ್ಟಿರಲಿಲ್ಲ.
ಇದನ್ನೂ ಓದಿ:ಬಿಜೆಪಿಯವರು ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ: ಸಿದ್ದರಾಮಯ್ಯ
ಅದರಿಂದ ಅಸಮಾನಧಾನಗೊಂಡ ಪಾಂಡೆ, ವೆಬ್‌ಸೈಟ್‌ನಲ್ಲಿರುವ ಡೇಟಾ ಅಳಿಸಿ ಸಂಪೂರ್ಣವಾಗಿ ನಿಷ್ಕ್ರೀಯಗೊಳಿಸಿದ್ದ. ಅದರಿಂದ ಚೈತನ್ಯಗೆ ವ್ಯವಹಾರದಲ್ಲಿ ಲಕ್ಷಾಂತರ ರೂ.ನಷ್ಟವಾಗಿತ್ತು. ಹೀಗಾಗಿ ಆಕ್ರೋಶಗೊಂಡ ಚೈತನ್ಯ ತನ್ನ ಸಹಚರರ ಜತೆ ಸೇರಿಕೊಂಡು ವಾಮಮಾರ್ಗದಿಂದ ಪಾಂಡೆಯನ್ನ ಸಂಪರ್ಕಿಸಿ, ಏಪ್ರಿಲ್ 23ರಂದು ಯಲಹಂಕದ ಬಿಬಿ ರಸ್ತೆಗೆ ಕರೆಸಿಕೊಂಡಿದ್ದರು. ನಂತರ ನಷ್ಟದ ಹಣ ವಸೂಲಿಗಾಗಿ ಅಪಹರಿಸಿ ಮಾಲ್ ವೊಂದಕ್ಕೆ ಕರೆದೊಯ್ದು ಪಿಸ್ತೂಲ್ ತೋರಿಸಿ 6.35 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.