ನಂಜನಗೂಡು: ಅಕ್ರಮ ಶಸ್ತ್ರಾಸ್ತ ಹೊಂದಿದ ಆರೋಪದ ಮೇಲೆ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1 ಪಿಸ್ತೂಲ್, 12 ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ನಂಜನಗೂಡಿನಲ್ಲಿ ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಡೆಗಟ್ಟಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಸಿಪಿಐ ಗೋಪಾಲಕೃಷ್ಣರ ತಂಡ ಪಟ್ಟಣದ ಊಟಿ ರಸ್ತೆಯ ಚರ್ಚ್ ಹಿಂಭಾಗದ ಬಡಾವಣೆಯಲ್ಲಿ ಒಂದಾಗಿ ವ್ಯವಹಾರ ನಡೆಸುತ್ತಿದ್ದ ಇಲ್ಲಿನ ಶಂಕರಪುರದ ಧನರಾಜ್ ಬೂಲಾ, ನೀಲಕಂಠನಗರ ನಿವಾಸಿ ಸಾಧಿಕ್ ಖಾನ್, ಶೈಹನ್ ಶಾ ಅವರನ್ನ ಬಂಧಿಸಿ, ಅವರಿಂದ ಸ್ಥಳದಲ್ಲೇ ಪಿಸ್ತೂಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈ ಮೂವರಿಗೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪ್ಸ್‌ರ್ ಖಾನ್ ಎಂಬಾತನ ನಂಟು ಬೆಳೆದ ಪರಿಣಾಮ ಅಕ್ರಮ ಶಸ್ತ್ರಾಸ್ತ ನಂಜನಗೂಡಿಗೆ ಕಾಲಿಟ್ಟಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಜೈಲಿಂದಲೇ ದಂಧೆ: ಈಗಾಗಲೇ 2 ಕೊಲೆಗಳಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತೀರುವ ಅಪ್ಸ್‌ರ್ ಖಾನ್, ಅಲ್ಲಿಂದಲೇ ಧನರಾಜ್ ಬೂಲಾಗೆ ಉತ್ತರ ಪ್ರದೇಶದ ಮೂಲದ ಶಸ್ತ್ರಾಸ್ತ ಮಾರಾಟಗಾರನ ಖಚಿತ ವಿಳಾಸ ನೀಡಿ ಈ ಪಿಸ್ತೂಲ್ ಹಾಗೂ ಗುಂಡುಗಳು ಧನರಾಜ್ ಬೂಲಾ ಕೈ ಸೇರುವಂತೆ ವ್ಯವಹಾರ ನಡೆಸಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದ ಹಿಂದೆ ಭಾರಿ ಜಾಲ ಕೆಲಸ ಮಾಡುತ್ತಿದ್ದು ಪೊಲೀಸರ ತನಿಖೆಯಿಂದ ಈ ಕುರಿತು ಇನ್ನಷ್ಟು ಪ್ರಕರಣ ಹೊರ ಬೀಳಬೇಕಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮತ್ತು ಎಎಸ್‌ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಹಾಗೂ ನಗರ ಪಿಎಸ್‌ಐ ಸವಿ ಸಿ.ಯು. ನೇತೃತ್ವದಲ್ಲಿ ಸಿಬ್ಬಂದಿ ಪಾಷಾ, ಸುರೇಶ್, ಅಬ್ದುಲ್, ಮಹೇಶ್, ಕೃಷ್ಣ, ಪ್ರಸನ್ನ ರಫೀಕ್ ಕಾರ್ಯಾಚರಣೆ ನಡೆಸಿದ್ದರು.
ನ್ಯಾಯಾಂಗ ಬಂಧನ: ಆರೋಪಿಗಳ ಸತತ ವಿಚಾರಣೆ ನಡೆಸಿ ಶುಕ್ರವಾರ ನಂಜನಗೂಡು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಧೀಶ ಬಿ.ಪಿ.ದೇವಮಾನೆ ಅವರು ಈ ಎಲ್ಲಾ ನಾಲ್ವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಆರೋಪಿಯಾದ ಜೈಲಿನಲ್ಲಿರುವ ಅಪ್ಸ್‌ರ್ ಖಾನ್‌ನನ್ನು ಪೊಲೀಸರು ಜೈಲಿನಿಂದ ಹೊರತಂದು ವಿಚಾರಣೆ ನಡೆಸಿದ್ದಾರೆ.