ಬೆಂಗಳೂರು: ಆಸ್ತಿಗಾಗಿ ತಂದೆಯನ್ನೇ ಹತ್ಯೆ ಮಾಡಲು ಒಂದು ಕೋಟಿ ರೂ. ಸುಪಾರಿ ನೀಡಿದ್ದ ಮಗ ಸೇರಿ ಮೂವರು ಮಾರತ್ತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾವೇರಪ್ಪ ಬಡಾವಣೆಯ ಇಂದ್ರಪ್ರಸ್ತ ಅಪಾರ್ಟ್‌ಮೆಂಟ್ ನಿವಾಸಿ ಮಣಿಕಂಠ (30), ಆತನ ಸಹಚರರಾದ ಹೊಸಕೋಟೆಯ ಆದರ್ಶ ಅಲಿಯಾಸ್ ಬೆಂಕಿ (26), ಶಿವಕುಮಾರ್ ಅಲಿಯಾಸ್ ನಡುವತ್ತಿ ಶಿವ(24) ಬಂಧಿತರು. ಆರೋಪಿಗಳು ಫೆ.13ರಂದು ಅಪಾರ್ಟ್‌ಮೆಂಟ್ ಮುಂದೆಯೇ ನಾರಾಯಣ ಸ್ವಾಮಿ (70) ಎಂಬುವರನ್ನು ಹತ್ಯೆಗೈದಿದ್ದರು.
ಪ್ರಕರಣ ಬಳಿಕ ನಾರಾಯಣಸ್ವಾಮಿ ಪುತ್ರ ಮಣಿಕಂಠನ ವರ್ತನೆ ಆಧರಿಸಿ ವಿಚಾರಣೆ ನಡೆಸಿದಾಗ 1 ಕೋಟಿ ರೂ. ಸುಪಾರಿ ರಹಸ್ಯ ಬಾಯಿಬಿಟ್ಟಿದ್ದಾನೆ. ಬಳಿಕ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ನಾರಾಯಣ ಸ್ವಾಮಿ ಇಂದ್ರಪ್ರಸ್ತ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಹೊಂದಿದ್ದು, ಈ ಪೈಕಿ ಒಂದು ಫ್ಲ್ಯಾಟ್‌ನಲ್ಲಿ ನಾರಾಯಣಸ್ವಾಮಿ ದಂಪತಿ, ಮತ್ತೂಂದು ಫ್ಲ್ಯಾಟ್‌ನಲ್ಲಿ ಆರೋಪಿ ಮಣಿಕಂಠ ವಾಸವಾಗಿದ್ದ. ದುಶ್ಚಟಗಳ ದಾಸನಾಗಿರುವ ಮಣಿಕಂಠ 2013ರಲ್ಲಿ ಮೊದಲ ಪತ್ನಿಯನ್ನು ಹತ್ಯೆಗೈದು ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಯಾದ ಬಳಿಕ ಅರ್ಚನಾ ಎಂಬಾಕೆ ಜತೆ 2ನೇ ಮದುವೆ ಆಗಿದ್ದ. ದಂಪತಿಗೆ ಒಂದು ಹೆಣ್ಣು ಮಗು ಇದೆ. ಆದರೂ ಆರೋಪಿ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದ. ಅದರಿಂದ ಬೇಸತ್ತ ಆಕೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜತೆಗೆ ವಿಚ್ಚೇಧನಕ್ಕೂ ಅರ್ಜಿ ಸಲ್ಲಿಸಿದ್ದರು. ಅದನ್ನು ತಡೆದಿದ್ದ ನಾರಾಯಣಸ್ವಾಮಿ, ಮತ್ತೂಮ್ಮೆ ಈ ರೀತಿ ನಡೆಯದಂತೆ ರಕ್ಷಣೆ ನೀಡುವುದಾಗಿ ಹೇಳಿ ನಗರದ ಕೆಲವೆಡೆ ತನ್ನ ಹೆಸರಿನಲ್ಲಿ 28 ಫ್ಲ್ಯಾಟ್‌ಗಳು ಮತ್ತು ಇತರೆ ಆಸ್ತಿಯನ್ನು ಸೊಸೆ ಅರ್ಚನಾ ಮತ್ತು ಮೊಮ್ಮಗಳ ಹೆಸರಿಗೆ ಬರೆಯುವುದಾಗಿ ಹೇಳಿದ್ದರು. ಇದರಿಂದ ಕೋಪಗೊಂಡ ಆರೋಪಿ ತಂದೆ ಜತೆ ಜಗಳ ಮಾಡಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಸಂಚು ರೂಪಿಸಿದ್ದನು ಎಂದು ಪೊಲೀಸರು ಹೇಳಿದರು.
1 ಕೋಟಿ ರೂ. ಸುಪಾರಿ: ಮೊದಲ ಪತ್ನಿ ಹತ್ಯೆ ಪ್ರಕರಣದಲ್ಲಿ ಮಣಿಕಂಠ ಜೈಲು ಸೇರಿದ್ದ ಸಂದರ್ಭದಲ್ಲಿ ಆದರ್ಶ ಮತ್ತು ಶಿವಕುಮಾರ್ ಪರಿಚಯವಾಗಿದ್ದರು. ಬಿಡುಗಡೆ ನಂತರವೂ ಸಂಪರ್ಕದಲ್ಲಿದ್ದರು. ತಂದೆ, ಎಲ್ಲಾ ಆಸ್ತಿಯನ್ನು ಪತ್ನಿ, ಮಗಳ ಹೆಸರಿಗೆ ಬರೆಯುತ್ತಾರೆ ಎಂದು ಆಕ್ರೋಶಗೊಂಡಿದ್ದ ಮಣಿ ಕಂಠ ಸ್ನೇಹಿತರ ಜತೆ ಸೇರಿ ತಂದೆ ಹತ್ಯೆಗೆ ಸಂಚು ರೂಪಿಸಿದ್ದ. ಆದರಂತೆ ಫೆ.13ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೆ.ಆರ್.ಪುರಂ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಹೋಗುವ ಮಾಹಿತಿಯನ್ನು ಮಣಿಕಂಠನೇ ತನ್ನ ಸಹಚರರಿಗೆ ನೀಡಿದ್ದ. ಅದರಂತೆ ಬೈಕ್‌ನಲ್ಲಿ ಬಂದ ಆರೋಪಿಗಳು ನಾರಾಯಣಸ್ವಾಮಿ ಯನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ಬಳಿಕ ಮಣಿಕಂಠ ಕೂಡ ತನಗೆ ಏನು ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಸಿಕ್ಕಿಬಿದ್ದಿದ್ದು ಹೇಗೆ? : ಕೊಲೆ ಪ್ರಕರಣದ ತನಿಖೆ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರೂ ನಾರಾಯಣಸ್ವಾಮಿಗೆ ಯಾರು ಶತ್ರುಗಳು ಇರಲಿಲ್ಲ. ಬೇರೆ ವಾಜ್ಯ ಕೂಡ ಇರಲಿಲ್ಲ. ಈ ಮಧ್ಯೆ ಮಣಿಕಂಠ ಕೆಲವರ ಬಳಿ ಇನ್ಮುಂದೆ ಇಡೀ ಆಸ್ತಿ ತನಗೆ ಸೇರಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದ. ಜತೆಗೆ ಆತನ ಈ ಹಿಂದಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿದಾಗ ಕೆಲವೊಂದು ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸುಪಾರಿ ರಹಸ್ಯ ಬಾಯಿಬಿಟ್ಟಿದ್ದಾನೆ.