ವಿಜಯಪುರ: ಕನ್ನಡ ನೆಲ, ಜಲದ ವಿಷಯವಾಗಿ ಕನ್ನಡಿಗರ ಭಾವನೆಗಳಿಗೆ ನೋವುಂಟಾಗುವಂತೆ ಮಾತನಾಡಿರುವ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಯುವ ಮುಖಂಡ ಅಣ್ಣಾಮಲೈ ಕೂಡಲೇ ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಕರವೇ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರ್ನಾಟದಲ್ಲಿ ತಮ್ಮ ಸೇವಾ ಅವಧಿಯಲ್ಲಿ ನ್ಯಾಯಯುತವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರಣ ಕನ್ನಡಿಗರು ಅವರನ್ನು ಅಕ್ಕರೆಯಿಂದ ಕಂಡು ಗೌರವಿಸುತ್ತಿದ್ದಾರೆ. ಈಗ ರಾಜಕೀಯ ಪಕ್ಷ ಸೇರ್ಪಡೆಯಾಗಿರುವ ಅವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ.
ವೈಯಕ್ತಿಕ ಕಾರಣಗಳಿಂದ ಅನ್ನ ಆಹಾರ ನೀರು, ನೆಲ ಮತ್ತು ಪ್ರೀತಿಯನ್ನು ಕೊಟ್ಟ ಕನ್ನಡಿಗರನ್ನು ಜೊತೆಗೆ ಕರ್ನಾಟಕವನ್ನು ಹಿಯಾಳಿಸುವ ರೀತಿಯಲ್ಲಿ ಮಾತನಾಡಿದ ರೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ ಮಾತನಾಡಿ, ಕರ್ನಾಟಕದ ಕಾವೇರಿ, ಕೃಷ್ಣೆ, ಇಲ್ಲಿಯ ಜನರ ಜೀವನಾಡಿ ಮತ್ತು ಜೀವ ಜಲ ಹೀಗಿದ್ದುಕೊಂಡು ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜಕೀಯ ಸೇರಿಕೊಂಡು ಸದ್ಯಕ್ಕೆ ಅದೇ ಕಾವೇರಿ ನದಿಯ ವಿಷಯವಾಗಿ ಹೀನಾಯವಾಗಿ ಮಾತನಾಡಿ ಜೊತೆಗೆ ಉಪವಾಸ ಕೂಡುತ್ತೇನೆ ಎಂಬ ರಾಜಕೀಯ ನೀತಿ ಸರಿಯಲ್ಲ.
ಕನ್ನಡಿಗರು ಸಹನಶೀಲರು, ಶಾಂತಿಪ್ರೀಯತರು ಜೊತೆಗೆ ಭಾವೈಕ್ಯತೆಯಿಂದ ನಡೆದುಕೊಳ್ಳುವರು. ಆದರೆ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಮಾಡಿಕೊಂಡು ಕನ್ನಡಗರಿಂದಲೇ ಸಿಂಗಂ ಎನಿಸಿಕೊಂಡ ಅಣ್ಣಾಮಲೈ ರಾಜಕೀಯ ದುರುದ್ದೇಶ ಕ್ರಮ ಸರಿಯಲ್ಲ ಎಂದರು. ದಸ್ತಗೀರ ಸಾಲೋಟಗಿ, ರಾಜು ಹಜೇರಿ, ಮಲ್ಲು ಮಡಿವಾಳರ, ರಜಾಕ್ ಕಾಖಂಡಕಿ, ಬಸವರಾಜ ಬಿ.ಕೆ, ರಮೇಶ ಮುಂಡೆವಾಡಿ, ಯಶವಂತ ದೊಡಮನಿ, ನಸ್ಸೀಂ ರೋಜಿನ್ದಾರ, ಫಿದಾ ಕಲಾದಗಿ ಪಾಲ್ಗೊಂಡಿದ್ದರು.