ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಅಹಿತಕರ ಘಟನೆಗಳ ಬಳಿಕ ಈಗ ಕೆಲವು ಪೊಲೀಸ್ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ 19ರಂದು ನಗರದ ಸ್ಟೇಟ್ ಬ್ಯಾಂಕ್ ಮತ್ತು ಬಂದರ್ ಪರಿಸರದ ನೆಲ್ಲಿಕಾಯಿ ರಸ್ತೆ, ಅಜೀಜುದ್ದೀನ್ ರಸ್ತೆ, ಮಿಷನ್ ರಸ್ತೆ ಮತ್ತಿತರ ಕಡೆ ಪ್ರತಿಭಟನಾಕಾರರು ಗುಂಪು ಸೇರಿದ್ದರಿಂದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಈ ಸಂಘರ್ಷದಲ್ಲಿ ಗೋಲಿಬಾರ್‌ಗೆ ಇಬ್ಬರು ಸಾವನ್ನಪ್ಪಿದ್ದರು. ಘಟನೆ ಬಳಿಕ ಪೊಲೀಸ್ ಕಾರ್ಯಾಚರಣೆ ವಿರುದ್ಧ ಆಕ್ರೋಶಿತರಾದ ಕೆಲವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಇದರಿಂದಾಗಿ ಕೆಲವು ಪೊಲೀಸ್ ಅಧಿಕಾರಿಗಳಿಗೂ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿದೆ.
ಕದ್ರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಮ ಮತ್ತು ಕುಟುಂಬದವರಿಗೆ ಹೆಚ್ಚಿನ ಬೆದರಿಕೆ ಕರೆಗಳು ಬರುತ್ತಿವೆ. ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಾರಾಮ ಮತ್ತವರ ಕುಟುಂಬದವರಿಗೆ ಜೀವ ಬೆದರಿಕೆಯನ್ನು ಹಾಕುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ಸ್‌ಪೆಕ್ಟರ್ ಶಾಂತಾರಾಮ ಮತ್ತು ಇತರ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅನಾಮಧೇಯ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ. ಹಾಗಾಗಿ ಕಿಡಿಗೇಡಿಗಳ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಲಾಗಿದೆ.
-ಡಾ| ಹರ್ಷ ಪಿ.ಎಸ್., ಪೊಲೀಸ್ ಕಮಿಷನರ್