Advertisement

Puttur: ಅಪರಿಚಿತನ ಬೆದರಿಕೆ ಕರೆಗೆ 16 ಲಕ್ಷ ರೂ. ಕಳೆದುಕೊಂಡ ವೈದ್ಯ!

08:10 AM Mar 31, 2024 | Team Udayavani |

ಪುತ್ತೂರು: ದಿಲ್ಲಿ ಪೊಲೀಸರ ಹೆಸರಿನಲ್ಲಿ ದೂರವಾಣಿ ಮೂಲಕ ಬೆದರಿಕೆ ಒಡ್ಡಿ ಪುತ್ತೂರಿನ ವೈದ್ಯರೋರ್ವರಿಂದ ಲಕ್ಷಾಂತರ ರೂ. ದೋಚಿದ ಘಟನೆ ಸಂಭವಿಸಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೊಳುವಾರು ನಿವಾಸಿ, ನಗರದ ಎಲ್‌ಐಸಿ ಸಂಪರ್ಕ ರಸ್ತೆಯ ಆಸ್ಪತ್ರೆಯೊಂದರ ವೈದ್ಯ ಡಾ| ಚಿದಂಬರ ಅಡಿಗ ಬರೋಬ್ಬರಿ 16.5 ಲಕ್ಷ ರೂ. ಹಣವನ್ನು ಸೈಬರ್‌ ವಂಚಕರ ಕೃತ್ಯದಿಂದ ಕಳೆದುಕೊಂಡಿದ್ದಾರೆ.

ಘಟನೆ ವಿವರ:

ವೈದ್ಯರಿಗೆ ಅಪರಿಚಿತ ವ್ಯಕ್ತಿಯೊಬ್ಬ ದಿಲ್ಲಿಯ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, “ನಿಮ್ಮ ಮೇಲೆ ದಿಲ್ಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿ, ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳಸಾಗಾಟ ಕುರಿತು ಪ್ರಕರಣ ದಾಖಲಾಗಿದೆ. ಬಂಧಿಸುವಂತೆ ಕೋರ್ಟ್‌ನಿಂದ ವಾರಂಟ್‌ ಕೂಡ ಆಗಿದೆ’ ಎಂದು ಬೆದರಿಸಿದ್ದೂ ಅಲ್ಲದೆ “ನೀವು ದಿಲ್ಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು. ಇಲ್ಲಿಗೆ ಬರಲು ಆಗದಿದ್ದರೆ ಈಗ ಅನ್‌ಲೈನ್‌ ಮೂಲಕ ಕೋರ್ಟ್‌ನ ಕೇಸ್‌ ನಡೆಸುತ್ತೇವೆ. ಬ್ಯಾಂಕ್‌ ಅಕೌಂಟ್‌ನಲ್ಲಿರುವ ಹಣವನ್ನು ನಾನು ಹೇಳುವ ಅಕೌಂಟ್‌ಗೆ ವರ್ಗಾವಣೆ ಮಾಡಬೇಕು. ನಿಮ್ಮ ಕೋರ್ಟ್‌ ಕೇಸ್‌ ಮುಗಿದ ಮೇಲೆ ನಿಮಗೆ ನಿಮ್ಮ ಹಣ ಮರಳಿ ಸಿಗುತ್ತದೆ. ಒಂದು ವೇಳೆ ಹಣ ನೀಡಲು ವಿಫಲರಾದರೆ ನಿಮ್ಮ ಮನೆಗೆ ಬಂದು ಬಂಧಿಸುತ್ತೇವೆ’ ಎಂದು ಹೆದರಿಸಿದ್ದ. ದಿಲ್ಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಕೂಡ ವೈದ್ಯರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ,

ಇದನ್ನು ನಂಬಿ ಗಾಬರಿಗೊಂಡ ವೈದ್ಯ ಬ್ಯಾಂಕ್‌ ಖಾತೆಯಿಂದ 16,50,000 ರೂ. ವರ್ಗಾಯಿಸಿದರು. ಅಪರಿಚಿತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡು ಗೆಳೆಯರಿಗೆ ವಿಷಯ ತಿಳಿಸಿದಾಗ ಆನ್‌ಲೈನ್‌ ಮೋಸದ ಕೃತ್ಯದ ಬಗ್ಗೆ ತಿಳಿದು ಬಂದಿದೆ ಎಂದು ಡಾ| ಚಿದಂಬರ ಅಡಿಗ ದೂರಿನಲ್ಲಿ ಹೇಳಿದ್ದಾರೆ.

Advertisement

ವೈದ್ಯರೇಕೆ ಮೋಸ ಹೋದರು?:

ಆನ್‌ಲೈನ್‌ ವಂಚನೆಯ ಪ್ರಕರಣಗಳು ದಿನೇದಿನೆ ನೂರಾರು ಘಟಿಸುತ್ತಿದ್ದು, ಈ ಎಲ್ಲ ಸಂಗತಿಗಳನ್ನು ತಿಳಿದುಕೊಂಡಿರುವ ವೈದ್ಯರೇ ಈ ಜಾಲಕ್ಕೆ ಬಿದ್ದಿರುವುದು ಅಚ್ಚರಿ ಮೂಡಿಸಿದೆ. ಅಪರಿಚಿತ ದೂರವಾಣಿ ಮೂಲಕ ಬೆದರಿಸಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಏಕಾಏಕಿ 16 ಲಕ್ಷ ರೂ. ಪಾವತಿಸಿರುವುದು ಕೂಡ ಹಲವು ಸಂದೇಹಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next