Advertisement

ಹೆಚ್ಚಿದ ಧಗೆ.. ಬಾಯಾರಿದ ಜನ-ಜಾನುವಾರು

06:27 AM Mar 03, 2019 | Team Udayavani |

ವಾಡಿ: ಮತ್ತೂಮ್ಮೆ ಭೀಕರ ಬರಗಾಲಕ್ಕೆ ತುತ್ತಾಗಿರುವ ಬಿಸಿಲು ನಾಡು ಕಲಬುರಗಿಯ ಜೀವನದಿಗಳಾದ ಭೀಮೆ ಮತ್ತು ಕಾಗಿಣಾ ಜಲವಿಲ್ಲದೆ ಭಣಗುಡುತ್ತಿದ್ದು, ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ವಾಡಿ ನಗರದಲ್ಲಿ ಅಕ್ಷರಶಃ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದಿದೆ.
ಪುರಸಭೆ ಆಧೀನದ ಹಲವು ಬಡಾವಣೆಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಎಲ್ಲೆಡೆ ಖಾಲಿ ಕೊಡಗಳ ಪ್ರದರ್ಶನವೇ ಕಾಣುತ್ತಿದೆ. ನಳಗಳು ಮತ್ತು ಬೋರ್‌ವೆಲ್‌ಗ‌ಳ ಸುತ್ತ ನೂರಾರು ಕೊಡಗಳು ನೀರಿಗಾಗಿ ಧರಣಿ ಕುಳಿತಿವೆ. ಸೈಕಲ್‌ ಮತ್ತು ಬೈಕ್‌ಗಳ ಮೇಲೆ ಯುವಕ-ಯುವತಿಯರು
ಕೊಡಗಳನ್ನು ಹೊತ್ತು ದೂರದ ಪ್ರದೇಶಗಳಿಂದ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿವೆ.

Advertisement

ಇಡೀ ವಿಶ್ವಕ್ಕೆ ಸಿಮೆಂಟ್‌ ಸರಬರಾಜು ಮಾಡುತ್ತಿರುವ ಹೆಸರಾಂತ ಎಸಿಸಿ ಕಾರ್ಖಾನೆ ಹೊಂದಿರುವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಅತಿದೊಡ್ಡ ನಗರ ವಾಡಿಯಲ್ಲಿ ಜನರು ಜಲದಾಹಕ್ಕೆ ತತ್ತರಿಸಿದ್ದಾರೆ.
ಸಾರ್ವಜನಿಕ ಬಾವಿಗಳಲ್ಲಿ ಹೂಳು ತುಂಬಿ ನೀರು ಬಳಕೆಗೆ ಬಾರದಂತಾಗಿದೆ. ಹಲವು ಬೋರ್‌ವೆಲ್‌ಗ‌ಳು ದುರಸ್ತಿ ಕಾಣದೆ ಮುರಿದು ಬಿದ್ದಿವೆ. ನಿರ್ವಹಣೆ ಕೊರತೆಯಿಂದ ಕೆಲ ಬೋರ್‌ವೆಲ್‌ ಗಳು ಕಸದ ತೊಟ್ಟಿ ಸೇರಿವೆ. ನೇತಾಜಿ ನಗರ, ಮಲ್ಲಿಕಾರ್ಜುನ ದೇವಸ್ಥಾನ ಏರಿಯಾ, ಬಿಯ್ನಾಬಾನಿ ಬಡಾವಣೆ, ಇಂದಿರಾ ಕಾಲೋನಿ, ಭೀಮನಗರ, ಚೌಡೇಶ್ವರ ಕಾಲೋನಿ, ಹನುಮಾನ ನಗರ, ಪಿಲಕಮ್ಮಾ ಬಡಾವಣೆ, ರಾಮ ಮಂದಿರ ಬಡಾವಣೆ ಹೀಗೆ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. 

ನದಿಯಲ್ಲಿ ನೀರು ಖಾಲಿಯಾಗಿ ಎರಡು ತಿಂಗಳಾಯಿತು. ಐದಾರು ದಿನಕ್ಕೊಮ್ಮೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧ ನೀರಂತೂ ಕನಸಿನ ಮಾತಾಗಿದೆ. ಜನರು ಪರದಾಡುವ ಮುಂಚೆ ಸಮಸ್ಯೆ ನಿವಾರಿಸಬೇಕಾದ ಪುರಸಭೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಗಾಢ ನಿದ್ರೆಗೆ ಜಾರಿದ್ದಾರೆ. ಕೋಟ್ಯಂತರ ರೂ. ಅನುದಾನ ಇದ್ದರೂ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಆಡಳಿತಕ್ಕೆ
ಸಾಧ್ಯವಾಗುತ್ತಿಲ್ಲ. ಕೂಡಲೇ ಜಲಾಶಯಗಳಿಂದ ನದಿಗೆ ನೀರು ಹರಿಸಬೇಕು. ನದಿಗೆ ನೀರು ಬರುವ ವರೆಗೂ ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ತಕ್ಷಣವೇ ಮುಂದಾಗಬೇಕು. ನಿರ್ಲಕ್ಷé ತೋರಿದರೆ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ.
 ಮಲ್ಲಿನಾಥ ಹುಂಡೇಕಲ್‌, ಸಮಾಜವಾದಿ ಹೋರಾಟಗಾರ 

ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆಂದು ಪುರಸಭೆಯಿಂದ 35 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಜಲಮೂಲಗಳ ರಕ್ಷಣೆಗೆ ಮುಂದಾಗಬೇಕಾದ ಪುರಸಭೆ ಆಡಳಿತ ಲೋಕಸಭೆ ಚುನಾವಣೆ ನಿಮಿತ್ತ ಸಭೆ, ಸಮಾರಂಭಗಳಲ್ಲಿ ಮುಳುಗಿದೆ. ಎಸಿಸಿ ಸಿಮೆಂಟ್‌ ಕಂಪನಿ ಜಾಕ್‌ ವೆಲ್‌ನಿಂದ ಪುರಸಭೆಗೆ ಸೇರಿದ ನೀರು ಶುದ್ಧೀಕರಣ ಘಟಕಕ್ಕೆ ಶಾಶ್ವತ ಪೈಪುಗಳ ಸಂಪರ್ಕ ಜೋಡಿಸಲು ಚಿಂತನೆ ನಡೆಸುತ್ತಿದ್ದ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಈ ತೀರ್ಮಾನ ಕೈ ಬಿಟ್ಟಿದ್ದೇ ಜನರ ಪರದಾಟಕ್ಕೆ ಕಾರಣವಾಗಿದೆ. ದಿನೆದಿನೇ ಗಂಭೀರತೆ ಪಡೆದುಕೊಳ್ಳುತ್ತಿರುವ ನೀರಿನ ಸಮಸ್ಯೆ ಜನರ ಆಕ್ರೋಶಕ್ಕೂ ಕಾರಣವಾಗಿದೆ.

„ಮಡಿವಾಳಪ್ಪ ಹೇರೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next