ಶಿವಮೊಗ್ಗ: ಜೈಲಿನಲ್ಲಿದ್ದುಕೊಂಡು ಉದ್ಯಮಿಗೆ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ರೌಡಿಶೀಟರ್ ಬಚ್ಚನ್ ಗೆ ಸೇರಿದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಸಿಇಎನ್ ಠಾಣೆ ಸಿಪಿಐ ಹಾಗೂ ತುಂಗಾನಗರ ಠಾಣೆ ಪ್ರಭಾರ ಸಿಪಿಐ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ರೌಡಿಶೀಟರ್ ಬಚ್ಚನ್ ಬಳಿ ಇದ್ದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ರೌಡಿ ಬಚ್ಚನ್ ನನ್ನು ಪ್ರತ್ಯೇಕ ಕೋಣೆಯಲ್ಲಿಟ್ಟು ನಿಗಾ ವಹಿಸಲು ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ
ದರೋಡೆ, ಅಪಹರಣ ಸೇರಿದಂತೆ ವಿವಿಧ ಪ್ರಕರಣಗಳಡಿ ಅರೆಸ್ಟ್ ಅಗಿ ಜೈಲಿನಲ್ಲಿರುವ ರೌಡಿ ಬಚ್ಚನ್ ಜೈಲಿನಲ್ಲಿದ್ದುಕೊಂಡು ಉದ್ಯಮಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದ. ಕಳೆದ ಜನವರಿ 23 ರಂದು ಶಿವಮೊಗ್ಗದ ಮದಾರಿಪಾಳ್ಯದ ನಾಸೀರ್ ಖಾನ್ ಎಂಬ ಉದ್ಯಮಿಗೆ ಬೆದರಿಕೆ ಹಾಕಿದ್ದ ಬಚ್ಚನ್, ಕೇಳಿದಷ್ಟು ಹಣ ನೀಡದಿದ್ದರೆ, ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದ.
ಕಳೆದ ಅಕ್ಟೋಬರ್ ನಲ್ಲಿ ಕರೆ ಮಾಡಿ, ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಬಚ್ಚನ್, ಜೊತೆಗೆ ಉದ್ಯಮಿಯ ಮನೆಯ ಬಳಿ ಬೆಂಬಲಿಗರನ್ನು ಕಳುಹಿಸಿ, ಗಲಾಟೆ ಮಾಡಿಸಿದ್ದ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ಇಂದು ಜೈಲಿಗೆ ದಾಳಿ ನಡೆಸಿ ಬಚ್ಚನ್ ನ ಮೊಬೈಲ್ ವಶಕ್ಕೆ ಪಡೆಯಲಾಗಿದೆ.