ರಾಯಚೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಧಿಕಾರದಾಸೆಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ಬರುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು.
ಮಾನ್ವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಭಯ ಪಕ್ಷಗಳ ನಾಯಕರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಜನರ ಪರ ಕಾಳಜಿಯಿಲ್ಲ. ಕೇವಲ ಸಣ್ಣ ವಿಚಾರಗಳಿಗೆ ಹೆಚ್ಚು ಮಹತ್ವ ಕೊಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಸಮಾಜದಲ್ಲಿ ಶಾಂತಿ ಬಯಸುತ್ತದೆ. ಯುವಕರು ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಸಮಾಜ ಕಟ್ಟುವ ಕೆಲಸ ಮಾಡಲಿ ಎಂದರು.
ಇತಿಹಾಸ ಗೊತ್ತಿಲ್ಲದ ಕೆಲ ನಾಯಕರು ಗಾಂಧೀಜಿ ಹತ್ಯೆ ಮಾಡಿದವರನ್ನೂ ಹೋರಾಟಗಾರರಂತೆ ಬಿಂಬಿಸುವ ಪ್ರಯತ್ನಿಸುತ್ತಿರುವುದು ವಿಷಾದದ ಸಂಗತಿ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಕೋಮು ದಳ್ಳುರಿ ಸೃಷ್ಟಿಸುತ್ತಿರುವುದು ಜನ ಗಮನಿಸುತ್ತಿದ್ದಾರೆ. ಬಿಜೆಪಿ ಕಳ್ಳ ಮಾರ್ಗದಲ್ಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಅಸಮರ್ಥವಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಗಿರುವ ಬದ್ಧತೆ ರಾಷ್ಟ್ರೀಯ ಪಕ್ಷಗಳಿಗಿಲ್ಲ ಎಂದರು.
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಬಿಜೆಪಿಯ ಕೇಂದ್ರದ ಸಂಸದೀಯ ಮಂಡಳಿಗೆ ಬಿಎಸ್ ವೈ ನೇಮಕ ಮಾಡಲಾಗಿದೆ. ಚುನಾವಣೆ ನಂತರ ಅವರನ್ನು ಕೇಂದ್ರ ಬಿಜೆಪಿ ನಾಯಕರು ಮತ್ತೆ ಮನೆಗೆ ಕಳಿಸುತ್ತಾರೆ. ರಾಜ್ಯ ರಾಜಕೀಯ ವಿದ್ಯಮಾನಗಳಿಂದ ಕೆಲ ನಾಯಕರು ಆನೆಬಲ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದು, ಯಾವ ಆನೆ ಬಲ ಇಲ್ಲ. ಇದು ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದರು.
ಇದನ್ನೂ ಓದಿ:“ರಾಷ್ಟ್ರೀಯ ಮಿಷನ್” ಗಾಗಿ “ಮಿಸ್ಡ್ ಕಾಲ್” ಅಭಿಯಾನ ಪ್ರಾರಂಭಿಸಿದ ಕೇಜ್ರಿವಾಲ್
ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಸಿಆರ್ ನಮ್ಮ ಆತ್ಮೀಯರು. ಹಾಗೆಂದ ಮಾತ್ರಕ್ಕೆ ರಾಯಚೂರಲ್ಲ ರಾಜ್ಯದ ಯಾವುದೇ ಭಾಗವನ್ನು ಬಿಟ್ಟು ಕೊಡುವ ಮಾತಿಲ್ಲ. ಆಂಧ್ರದ ವಲಸಿಗರನ್ನು ನಮ್ಮವರಂತೆಯೇ ಕಂಡು ಕೃಷಿ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇವೆ. ಸೌಹಾರ್ದತೆಗೆ ನೆರೆ ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು ಎಂದರು.