Advertisement

ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜೀವ ಬೆದರಿಕೆ; ದೂರು ದಾಖಲು

03:44 PM Jul 12, 2023 | Team Udayavani |

ಸಾಗರ: ಸರ್ಕಾರಿ ಜಾಗ ಒತ್ತುವರಿ ತೆರವು ಮಾಡಿ ಅಗಳ ನಿರ್ಮಿಸಲು ಹೋಗಿದ್ದ ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಏಳು ಜನರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ತಾಲೂಕಿನ ಕಸಬಾ ಹೋಬಳಿ ಮಡಸೂರು ಗ್ರಾಮದ ಸರ್ವೇ ನಂ. 71ರ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ನೇತೃತ್ವದ ಕಂದಾಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಸ್ಥಳದಲ್ಲಿ ಬೀಟೆ, ನಂದಿ, ಹೊನ್ನೆ ಇತ್ಯಾದಿ ಕಾಡು ಜಾತಿ ಮರಗಳನ್ನು ಕಡಿತಲೆ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ತಹಶೀಲ್ದಾರ್ ಅವರು ವಲಯ ಅರಣ್ಯಾಧಿಕಾರಿ ಅರವಿಂದ್ ಅವರನ್ನು ಸ್ಥಳಕ್ಕೆ ಕರೆಸಿ ಕೊಂಡಿದ್ದಾರೆ.

ಜಂಟಿ ಸರ್ವೆ ನಡೆಸಿದಾಗ ಸರ್ಕಾರಿ ಜಾಗದಲ್ಲಿ ಮರ ಕಡಿತಲೆ ಮಾಡಿ, ಒತ್ತುವರಿ ಮಾಡುವ ಪ್ರಯತ್ನ ನಡೆಸಿದ್ದು ಕಂಡು ಬಂದಿತ್ತು. ಸ್ಥಳದಲ್ಲಿದ್ದ ಗ್ರಾಮಸ್ಥರು ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಟ್ರಂಚ್ ಹೊಡೆಯಲು ಮನವಿ ಮಾಡಿ, ಟ್ರಂಚ್ ಹೊಡೆಯಲು ಜೆಸಿಬಿಯನ್ನು ಗ್ರಾಮಸ್ಥರು ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಟ್ರಂಚ್ ಹೊಡೆಯಲು ಬಂದ ಜೆಸಿಬಿ ಚಾಲಕರಿಗೆ ಒತ್ತುವರಿದಾರರು ಬೆದರಿಕೆ ಹಾಕಿ ವಾಪಾಸ್ ಕಳಿಸಿದ್ದಾರೆ.
ನಂತರ ಗ್ರಾಮಸ್ಥರು ಬೇರೆ ಕಡೆಯಿಂದ ಜೆಸಿಬಿಯನ್ನು ತೆಗೆದುಕೊಂಡು ಬಂದು ತಹಶೀಲ್ದಾರ್ ಸಮ್ಮುಖದಲ್ಲಿ ಟ್ರಂಚ್ ಹೊಡೆಯಲು ಪ್ರಯತ್ನ ನಡೆಸಿದಾಗ ಒತ್ತುವರಿದಾರರು ಜೆಸಿಬಿ ಚಾಲಕರನ್ನು ಬೆದರಿಸಿ, ಜೆಸಿಬಿ ಎದುರು ಬಂದು ನಮ್ಮನ್ನು ಸಾಯಿಸಿ ಎಂದು ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ತಹಶೀಲ್ದಾರ್ ಮತ್ತು ವಲಯ ಅರಣ್ಯಾಧಿಕಾರಿಗಳು ಒತ್ತುವರಿದಾರರಿಗೆ ಅಲ್ಲಿಂದ ತೆರಳುವಂತೆ ಸೂಚನೆ ನೀಡಿದ್ದಾರೆ.

ಆದರೆ ಒತ್ತುವರಿದಾರರಲ್ಲಿ ಕೆಲವರು ಜೆಸಿಬಿ ಕೀ ಕಿತ್ತುಕೊಂಡಿದ್ದಾರೆ. ಒತ್ತುವರಿದಾರರು ಕೆಲವರು ಕತ್ತಿ, ದೊಣ್ಣೆ, ಮಚ್ಚು ಇನ್ನಿತರೆಗಳಿಂದ ತಹಶೀಲ್ದಾರ್, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಮಲ್ಲೇಶ್ ಪೂಜಾರ್ ಗ್ರಾಮಾಂತರ ಠಾಣೆಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದರು.
ತಹಶೀಲ್ದಾರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹುಚ್ಚಪ್ಪ, ಆನಂದ್, ಗಂಗಾಧರ, ದೇವರಾಜ್, ವೀರೇಂದ್ರ, ಉಮೇಶ್, ಲಂಕೇಶ್ ಎಂಬುವವರ ವಿರುದ್ಧ ಸಿ.ಆರ್. ನಂ. 161/2023 ಕಲಂ 353, 307, 506, 504, 149
ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಜನರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next