ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್ ಆಪ್ತ ಹಾಗೂ ಬಸವಾನಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿರುವ ಕೆ.ಟಿ.ರತ್ನಾಕರ್ ತಮಗೆ ಕೊಲೆ ಬೆದರಿಕೆ ಇದೆ ಎಂದು ಮೂವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ತಾಲೂಕಿನ ಬಂಡಿಗಡಿ ಗ್ರಾಮದ ನಿವಾಸಿಯಾಗಿರುವ ಕೆ.ಟಿ. ರತ್ನಾಕರ್ ಅವರು ಶಶಿಕಾಂತ್ ಅತ್ತಿಕೊಡಿಗೆ, ಸ್ಕಂದ ಮತ್ತು ಶ್ರೀಕಾಂತ್ ಅತ್ತಿಕೊಡಿಗೆ ಎಂಬವರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಂಡಿರುವುದರಿಂದ ನನ್ನ ಕೊಲೆ ಮಾಡಿಸುವ ಮತ್ತು ಕೊಲೆ ಪ್ರಯತ್ನದ ಉದ್ದೇಶ ಹೊಂದಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಯಾವುದೇ ಸಮಯದಲ್ಲಿ ತಮಗೂ ಹಾಗೂ ತಮ್ಮ ಕುಟುಂಬದವರಿಗೂ ಜೀವಕ್ಕೆ ತೊಂದರೆ ಇರುವ ಸಂಭವವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನಲೆಯಲ್ಲಿ ರತ್ನಾಕರ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆಯ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಪ್ರಕರಣ ಕುರಿತು ನ್ಯಾಯಾಲಯದ ಆದೇಶವೊಂದು ಹೊರಬಿದ್ದಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಠಾಣಾಧಿಕಾರಿಗೆ ನ್ಯಾಯಾಲಯ ಆದೇಶಿಸಿದ್ದರಿಂದ ಈ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಮಾಹಿತಿಯ ಪ್ರಕಾರ ಮೊದಲ ಬಾರಿಗೆ ಬಸವಾನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಕೆ.ಟಿ.ರತ್ನಾಕರ್ ಎರಡನೇ ಬಾರಿಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಎದುರಾಳಿಗಳು ಫೇಸ್ ಬುಕ್ ನಲ್ಲಿ ರತ್ನಾಕರ್ ವಿರುದ್ಧ ಕೆಲ ಪೋಸ್ಟ್ ಗಳನ್ನು ಹರಿಬಿಟ್ಟಿದ್ದು ಇದು ರತ್ನಾಕರ್ ಅವರ ಬದುಕಿಗೆ ಬೆದರಿಕೆಯಂತೆ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ರತ್ನಾಕರ್ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.