Advertisement

Threat: ಗೋಲ್ ಗುಂಬಜ್‌ನ ನಕ್ಕರ್ ಖಾನಾ ಮ್ಯೂಸಿಯಂಗೆ ಬಾಂಬ್ ಬೆದರಿಕೆ

11:54 AM Jan 06, 2024 | Kavyashree |

ವಿಜಯಪುರ: ನಗರದಲ್ಲಿರುವ ಭಾರತೀಯ ಪುರಾತತ್ವ ಇಲಾಖೆ ಆಧೀನದ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಹಾಕಲಾಗಿದೆ.

Advertisement

morgue999lol ನಿಂದ ಬಂದಿರೋ ಇಮೇಲ್ enquiries@museumofindia.org ಸೇರಿದಂತೆ ನೂರಕ್ಕೂ ಅಧಿಕ ಬಾಂಬ್ ಬೆದರಿಕೆಯ ಸಂದೇಶವನ್ನೊಳಗೊಂಡ ಇ-ಮೇಲ್ ಗಳು ಬಂದಿವೆ ಎನ್ನಲಾಗಿದೆ.

ಭಾರತೀಯ ಪುರಾತತ್ವ ಇಲಾಖೆಯ ಆಧೀನಲ್ಲಿರುವ ಮ್ಯೂಸಿಯಂಗಳಿಗೆ ಬಾಂಬ್ ಇಟ್ಟಿರೋ ಬೆದರಿಕೆ ಬಂದಿದ್ದು, ಮ್ಯೂಸಿಯಂಗಳಲ್ಲಿ ಬಹು ಸ್ಫೋಟಕಗಳನ್ನು ಕಾಣದಂತೆ ಇಟ್ಟಿದ್ದೇವೆ ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ.

ನಾವು ಕಾಣದಂತೆ ಇರಿಸಿರುವ ಸ್ಫೋಟಕಗಳು ಬೆಳಿಗ್ಗೆ ಸ್ಟೋಟಗೊಂಡು, ಒಳಗಿದ್ದವರೆಲ್ಲಾ ಸಾವನ್ನಪ್ಪುತ್ತಾರೆ. ನಾವು Terrozers111  ಗ್ರೂಪ್ ನವರು ಎಂದು ಮೇಲ್ ನಲ್ಲಿ ಬರೆಯಲಾಗಿದೆ.

ನಮ್ಮ ಗ್ರೂಪ್ ಹೆಸರನ್ನು ಮಾದ್ಯಮಕ್ಕೆ ನೀಡಿದರೂ ನನ್ನ ಕೃತ್ಯ ನಿಲ್ಲದು ಎಂದು ಬರೆದಿದ್ದಾರೆ.

Advertisement

ಮುಂಜಾಗೃತಾ ಕ್ರಮವಾಗಿ ನಿನ್ನೆ ತಡರಾತ್ರಿಯಿಂದ ಗೋಲ ಗುಮ್ಮಟ ಆವರಣದಲ್ಲಿರುವ ನಕ್ಕರ್ ಖಾನಾ ಪಾರಂಪರಿಕ ವಸ್ತುಸಂಗ್ರಹಾಲಯ ತಪಾಸಣೆ ನಡೆಸಲಾಗಿದೆ. ಬಾಂಬ್ ನಿಷ್ಕ್ರೀಯ ದಳದಿಂದ ಬಾಂಬ್ ಇರಿಸಿರುವ ಕುರಿತು ಸಿಬ್ಬಂದಿ ವಸ್ತುಸಂಗ್ರಹಾಲಯದಲ್ಲಿ ತಪಾಸಣೆ  ನಡೆಸಿದ್ದಾರೆ. ಆದರೆ ವಸ್ತುಸಂಗ್ರಹಾಲಯದಲ್ಲಿ ಯಾವುದೇ ಸ್ಫೋಟಕದ ವಸ್ತುಗಳು ಪತ್ತೆಯಾಗಿಲ್ಲ. ಕಿಡಿಗೇಡಿಗಳು ಕೇವಲ ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಇ-ಮೇಲ್ ಮಾಡಿ ಬಾಂಬ್ ಬೆದರಿಕೆ ಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಪಾಸಣೆ ಬಳಿಕ ಜ.6ರ ಶನಿವಾರ ಬೆಳಿಗ್ಗೆಯಿಂದ ಗೋಲ್‌ ಗುಂಬಜ್ ಹಾಗೂ ಆವರಣದಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರಿಗೆ ಸ್ಮಾರಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಇದರ ಹೊರತಾಗಿಯೂ ಗೋಲ್‌ ಗುಂಬಜ್, ನಕ್ಕರ್ ಖಾನಾ ವಸ್ತುಸಂಗ್ರಹಾಲಯ ಪರಿಸರದಲ್ಲಿ ಮುಂಜಾಗೃತಾ ಕ್ರಮವಾಗಿ ಅದರ ಬಳಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.

ಇ-ಮೇಲ್ ಬಂದಿರುವ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸಲಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಪುರಾತತ್ವ ಇಲಾಖೆ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next