ಜಮ್ಮು : ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಸುಮಾರು 450 ಪಾಕ್ ಉಗ್ರರು ಎಲ್‌ಓಸಿ ದಾಟಿ ಕಾಶ್ಮೀರದೊಳಗೆ ನುಸುಳಿ ಬರಲು ಸಿದ್ಧರಾಗಿ ನಿಂತಿರುವುದಾಗಿ ಗುಪ್ತಚರ ದಳ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭಾರತೀಯ ಪಡೆಗಳು ಕಟ್ಟೆಚ್ಚರ ವಹಿಸಿವೆ. ಗುಪ್ತಚರ ದಳ ತನ್ನ ತಾಜಾ ವರದಿಯನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿದೆ.
ಇದೇ ಜೂನ್ 28ರಿಂದ ಆರಂಭಗೊಳ್ಳುವ ಅಮರನಾಥ ಯಾತ್ರೆಯನ್ನು ಗುರಿ ಇರಿಸಿಕೊಂಡು ದಾಳಿ ನಡೆಸಲು ಪಾಕ್ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಸುಮಾರು 450 ಉಗ್ರರು ಎಲ್‌ಓಸಿಯ ಆಚೆ ಸಿದ್ಧರಾಗಿ ನಿಂತಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ಕಲೆ ಹಾಕಿದೆ.
ರಮ್ಜಾನ್ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರು ಸರಕಾರಣ ಆಣತಿಯಂತೆ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರಿಂದ ಉಗ್ರರಿಗೆ ಮತ್ತೆ ಒಂದಾಗಲು, ಹೊಸ ಉಗ್ರರನ್ನು ನೇಮಿಸಿಕೊಳ್ಳಲು, ಮತ್ತು ದಾಳಿ ತಂತ್ರಗಳನ್ನು ರೂಪಿಸಲು ಸಾಕಷ್ಟು ಸಮಯಾವಕಾಶ ದೊರಕಿದಂತಾಗಿದೆ ಎಂದು ಗುಪ್ತಚರ ದಳ ಸೇನೆ ಮತ್ತು ಸರಕಾರವನ್ನು ಎಚ್ಚರಿಸಿದೆ.
ಎಲ್‌ಓಸಿ ಉದ್ದಕ್ಕೂ ಇರುವ ಪಾಕ್ ಬೆಂಬಲಿತ ಉಗ್ರರ ಲಾಂಚ್ ಪ್ಯಾಡ್‌ಗಳಲ್ಲಿ, ಸರ್ಜಿಕಲ್ ಸ್ಟ್ರೈಕ್ ಬಳಿಕ, ಉಗ್ರರ ಇಷ್ಟೊಂದು ಚಟುವಟಿಕೆ ಕಂಡುಬರುತ್ತಿರುವುದು ಇದೇ ಮೊದಲಾಗಿದೆ.
ಪಾಕ್ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸಲು ನೆರವಾಗುವ ಪಾಕಿಸ್ಥಾನದ ವಿಶೇಷ ಭದ್ರತಾ ಸಮೂಹದ (ಎಸ್‌ಎಸ್‌ಜಿ) ಇರುವಿಕೆ ಎಲ್‌ಓಸಿಯಲ್ಲಿ ಕಂಡುಬಂದಿರುವುದು ದೃಢಪಟ್ಟಿದೆ ಎಂಬುದಾಗಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.