ರಾಘವೇಂದ್ರ ರಾಜಕುಮಾರ್ ಅಭಿನಯದ “ಅಮ್ಮನ ಮನೆ’ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೆ ಇದೀಗ “ತ್ರಯಂಬಕಂ’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಪುನೀತ್‌ರಾಜಕುಮಾರ್ ಅವರನ್ನು ಆಹ್ವಾನಿಸಿದ್ದರು. ಢಮರುಗ ಬಾರಿಸುವುದರೊಂದಿಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು ಪುನೀತ್. “ಚಿತ್ರದ ಟ್ರೇಲರ್ ನೋಡಿ ಖುಷಿಯಾಗಿದೆ. ಟ್ರೇಲರ್ ಕುತೂಹಲ ಮೂಡಿಸುತ್ತದೆ. ಇನ್ನು, ರಾಘಣ್ಣ ಅವರಿಗೆ ಅನಾರೋಗ್ಯ ಎದುರಾದಾಗ ಭಯವಿತ್ತು. ಆಮೇಲೆ, ರಾಘಣ್ಣ ಅದನ್ನು ಎದುರಿಸಿ, ಇದೀಗ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ನನಗೆ ಶಿವಣ್ಣ ಮತ್ತು ರಾಘಣ್ಣ ಎರಡು ಪಿಲ್ಲರ್‌ಗಳಿದ್ದಂತೆ. ಮುಂದಿನ ದಿನಗಳಲ್ಲಿ ರಾಘಣ್ಣ ಹೀಗೆಯೇ ಚಿತ್ರಗಳಲ್ಲಿ ಬಿಜಿಯಾಗಿರಲಿ’ ಎಂದು ಹಾರೈಸಿದರು ಪುನೀತ್.
ರಾಘವೇಂದ್ರರಾಜಕುಮಾರ್‌ಗೆ “ತ್ರಯಂಬಕಂ’ ಚಿತ್ರ ಮೇಲೆ ವಿಶ್ವಾಸ ಹೆಚ್ಚಿದೆ. “ಇಲ್ಲಿ ನಾಯಕ, ನಾಯಕಿ ಎಂಬುದಿಲ್ಲ. ಕಥೆಯೇ ಎಲ್ಲವೂ ಆಗಿದೆ. ಅನುಪಮ ಗೌಡ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಡಬ್ಬಿಂಗ್ ವೇಳೆ ಅನುಪಮ ಅವರ ನಟನೆ ನೋಡಿ ಖುಷಿಯಾಯ್ತು. ಚೆನ್ನಾಗಿ ನಿರ್ವಹಿಸಿದ್ದಾರೆ. ಒಳ್ಳೆಯ ತಂಡದಲ್ಲಿ ನಾನೂ ಇದ್ದೇನೆ ಎಂಬುದೇ ಖುಷಿಯ ವಿಷಯ. ನಿರ್ಮಾಪಕರಿಗೆ ಇದು ಸಿನಿಮಾವಾದರೆ, ನನಗಿದು ಪ್ರಸಾದ ಎಂದರು ರಾಘವೇಂದ್ರ ರಾಜಕುಮಾರ್.
ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ, ನಿರ್ಮಾಪಕರು ಒಂದು ಕಥೆ ಬರೆದು ಕೊಟ್ಟಾಗ, ಅದರಲ್ಲಿ ಇಂಗ್ಲೀಷ್ ಚಿತ್ರವೊಂದರ ಸ್ಪೂರ್ತಿ ಇದ್ದದ್ದು ಗೊತ್ತಾಯಿತಂತೆ. ಕೊನೆಗೆ ನಾನು ಇದನ್ನು ಹೀಗೆ ಮಾಡೋದಿಲ್ಲ. ಬೇಕಾದರೆ, ಸ್ವಲ್ಪ ಬದಲಾವಣೆ ಮಾಡಿಕೊಂಡು ಮಾಡುತ್ತೇನೆ. ಅನುಮತಿ ಕೊಟ್ಟರೆ, ನಿರ್ದೇಶನ ಮಾಡುತ್ತೇನೆ ಅಂದಾಗ, ನಿರ್ಮಾಪಕರು ಒಪ್ಪಿದ್ದಕ್ಕೆ ಈ ಚಿತ್ರವಾಗಿದೆ. ಇನ್ನು, ನವೆಂಬರ್‌ದಲ್ಲಿ ಶುರುಮಾಡಿದ ಈ ಚಿತ್ರಕ್ಕೆ 24 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಐತಿಹಾಸಿಕ, ಪೌರಾಣಿಕ ಕಥೆಯ ಅಂಶ ಇಟ್ಟುಕೊಂಡು ಇಲ್ಲಿ ಎರಡನ್ನೂ ಸೇರಿಸಿ ಚಿತ್ರ ಮಾಡಲಾಗಿದೆ’ ಎಂಬುದು ದಯಾಳ್ ಮಾತು.
ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಬಗ್ಗೆ ಹೇಳುವ ಅವರು, “ನಿರ್ದೇಶಕ ದಯಾಳ್ ಅವರು, ಸಣ್ಣ ಕಲ್ಪನೆ ಇಟ್ಟುಕೊಂಡೇ ದೊಡ್ಡದ್ದಾಗಿ ಯೋಚಿಸುತ್ತಾರೆ. ಅದನ್ನು ದೊಡ್ಡ ಚಿತ್ರವನ್ನಾಗಿಸುವಲ್ಲಿ ಪ್ರಯತ್ನಿಸುತ್ತಾರೆ. ಆ ಪ್ರಯತ್ನದಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಇಲ್ಲಿ ಸಾಕಷ್ಟು ಚರ್ಚೆ ನಡೆಸಿ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯಲಾಗಿದೆ ಎಂದರು ನವೀನ್‌ಕೃಷ್ಣ. ನಿರ್ಮಾಪಕ ಸಂದೀಪ್, ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್, ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮಾ.ಹರೀಶ್, ಶಿವಮಣಿ, ರೋಹಿತ್ ಸಿನಿಮಾ ಕುರಿತು ಮಾತನಾಡಿದರು.