Advertisement

ತ್ರಾಸಿ ರಾಷ್ಟ್ರೀಯ ಹೆದ್ದಾರಿ ಚರಂಡಿ ಅವ್ಯವಸ್ಥೆ

10:39 AM Apr 10, 2022 | Team Udayavani |

ತ್ರಾಸಿ: ಕುಂದಾಪುರ – ಬೈಂದೂರು ಹೆದ್ದಾರಿ ಅವ್ಯವಸ್ಥೆ ಮಾತ್ರ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ತ್ರಾಸಿಯ ಜಂಕ್ಷನ್‌ ಬಳಿಯಿಂದ ಪೊಲೀಸ್‌ ನಿಲ್ದಾಣ ಬಳಿಯ ಕಿರು ಅಂಡರ್‌ಪಾಸ್‌ವರೆಗೆ ಇನ್ನೂ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಾಣವಾಗಿಲ್ಲ. ಇದರಿಂದ ಪ್ರತಿ ಮಳೆಗಾಲದಲ್ಲೂ ಈ ಭಾಗದ ಜನ ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ.

Advertisement

ತ್ರಾಸಿಯ ಜಂಕ್ಷನ್‌ ಬಳಿಯಿಂದ ಅಂಡರ್‌ಪಾಸ್‌ವರೆಗೆ ಎರಡೂ ಬದಿಯಲ್ಲಿಯೂ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಬೈಂದೂರು ಭಾಗದಿಂದ ಬರುವಾಗ ಎಡಗಡೆ ಭಾಗದಲ್ಲಿ ನೆಲೆಸಿರುವ ಹತ್ತಾರು ಮನೆಗಳಿಗೆ, ಇಲ್ಲಿ ಅಂಗಡಿ, ಉದ್ಯಮ ನಡೆಸುತ್ತಿರುವವರಿಗೆ ಪ್ರತಿ ವರ್ಷವೂ ಮಳೆ ನೀರು ನುಗ್ಗಿ, ಸಮಸ್ಯೆಯಾಗುತ್ತಿದೆ.

ಒಳ ರಸ್ತೆಗೂ ಸಮಸ್ಯೆ

ಹೆದ್ದಾರಿ ಅವ್ಯವಸ್ಥೆಯಿಂದಾಗಿ ಇಲ್ಲಿರುವ ಒಳ ರಸ್ತೆಗಳಿಗೂ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿನ ರೆಸಿಡೆನ್ಶಿಯಲ್‌ ರಸ್ತೆ, ಮಹಾಗಣಪತಿ ಸಭಾಭವನಕ್ಕೆ ಹೋಗುವ ರಸ್ತೆಗಳಲ್ಲಿಯೇ ಹೆದ್ದಾರಿಯ ಮಳೆ ನೀರು ಹರಿದು ಹೋಗುತ್ತಿದೆ. ಇದರಿಂದ ರಸ್ತೆಯ ಮಧ್ಯದಲ್ಲಿಯೇ ದೊಡ್ಡ – ದೊಡ್ಡ ಹೊಂಡಗಳು ಎದ್ದು, ವಾಹನ ಬರುವುದಕ್ಕೆ ಸಾಧ್ಯವಿಲ್ಲದಂತಾಗುತ್ತದೆ. ಪ್ರತೀ ವರ್ಷ ಸ್ಥಳೀಯರೇ ಮಳೆಗಾಲ ನಿಂತ ಬಳಿಕ ಈ ರಸ್ತೆಗಳಿಗೆ ಮಣ್ಣು ತುಂಬಿ, ಸಮತಟ್ಟು ಮಾಡಿ, ಸಂಚರಿಸುತ್ತಿದ್ದಾರೆ. ಇಲ್ಲಿನ ಜನರ ನಿತ್ಯದ ಗೋಳನ್ನು ಕೇಳುವವರೇ ಇಲ್ಲದಾಗಿದೆ.

ಕೃಷಿಗೂ ನುಗ್ಗುವ ನೀರು

Advertisement

ಹೆದ್ದಾರಿಯಿಂದ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯೇ ಇಲ್ಲದಾಗಿದೆ. ಇದರಿಂದ ಹೆದ್ದಾರಿ ಕಡೆಯಿಂದ ಹರಿಯುವ ಮಳೆ ನೀರು, ಇಲ್ಲಿರುವ ತಗ್ಗು ಪ್ರದೇಶಗಳ ಕೃಷಿ ಭೂಮಿಗೆ ನುಗ್ಗಿ, ಹಾನಿಯಾಗುತ್ತಿದೆ. ಇಲ್ಲಿರುವ 30 ಕ್ಕೂ ಹೆಚ್ಚು ಕೃಷಿಕರಿಗೆ ಇದರಿಂದಾಗಿ ಪ್ರತೀ ವರ್ಷವೂ ಸಮಸ್ಯೆಯಾಗುತ್ತಿದೆ.

ಟೋಲ್‌ ಯಾಕೆ ಹೆಚ್ಚಿಸುತ್ತೀರಿ?

ಹೆದ್ದಾರಿಯಲ್ಲಿ ಯಾವುದೇ ಕಾಮಗಾರಿ ನಡೆಸಲು ಮುಂದಾಗದಿದ್ದರೂ ಮಾತ್ರ ವರ್ಷದಿಂದ ವರ್ಷಕ್ಕೆ ಟೋಲ್‌ ದರ ಮಾತ್ರ ಯಾವುದೇ ಮುಲಾಜಿಲ್ಲದೆಯೇ ಹೆಚ್ಚಳವಾಗುತ್ತಿದೆ. ಈ ಬಾರಿಯೂ ಹೆಚ್ಚಿಸಲಾಗಿದೆ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕುಂದಾಪುರದಿಂದ ಬೈಂದೂರುವರೆಗಿನ ಹೆದ್ದಾರಿಯಲ್ಲಿ ಮಾತ್ರ ಯಾವುದೇ ದೊಡ್ಡ ಮಟ್ಟದ ಕಾಮಗಾರಿ ನಡೆದಿಲ್ಲ. ಆದರೆ ಟೋಲ್‌ನಲ್ಲಿ ಮಾತ್ರ ಕಳೆದ ವರ್ಷದಿಂದ ಈ ವರ್ಷಕ್ಕೆ ಮತ್ತೆ ಶೇ. 9 ರಷ್ಟು ಏರಿಸಿದ್ದಾರೆ. ಕಾಮಗಾರಿಯೇ ಮಾಡದೇ ಈ ಹೆಚ್ಚಳ ಯಾಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪ್ರಾಧಿಕಾರಕ್ಕೆ ಸಲ್ಲಿಕೆ

ತ್ರಾಸಿಯಿಂದ ಅಂಡರ್‌ಪಾಸ್‌ವರೆಗೆ ಎರಡೂ ಕಡೆಯಿಂದಲೂ ಸರ್ವಿಸ್‌ ರಸ್ತೆ ನಿರ್ಮಾಣ ಹಾಗೂ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಪಂಚಾಯತ್‌ನಿಂದ ನಿರ್ಣಯ ಮಾಡಿ, ಪ್ರಸ್ತಾವನೆಯನ್ನು ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಐಆರ್‌ಬಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. – ಗೀತಾ ದೇವಾಡಿಗ, ಅಧ್ಯಕ್ಷರು, ತ್ರಾಸಿ ಗ್ರಾ.ಪಂ.

ನೀರೆಲ್ಲಿಗೆ ಹೋಗಬೇಕು

ಹಿಂದೆ ಇದ್ದ ರಸ್ತೆಗೆ ಎರಡೂ ಮೋರಿ ಹಾಕಿ, ಅದರ ಮೇಲೆ ಮಣ್ಣು ಹಾಕಿ ಬಿಟ್ಟಿದ್ದಾರೆ. ಆ ಮೋರಿಯ ನೀರು ಎಲ್ಲಿಗೆ ಹೋಗಬೇಕು. ಕೇಳಿದರೆ ಇದಕ್ಕೆ ಯಾರಲ್ಲಿಯೂ ಉತ್ತರವಿಲ್ಲ. ತ್ರಾಸಿ ಜಂಕ್ಷನ್‌ನಿಂದ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ, ಅಂಗಡಿ ಇರುವವರಿಗೆ ತುಂಬಾ ಸಮಸ್ಯೆಯಾಗುತ್ತಿದೆ. – ಪರಮೇಶ್ವರ್‌ ಜಿ.ಬಿ., ತ್ರಾಸಿ ಸ್ಥಳೀಯರು

ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ

ನಾವು ಇಲ್ಲಿನ ಹೆದ್ದಾರಿ ಕಾಮಗಾರಿ ನಿಲ್ಲಿಸಿದಾಗಿನಿಂದ ಅಂದರೆ ಕಳೆದ 4-5 ವರ್ಷಗಳಿಂದ ಇಲ್ಲಿನ ಅರೆಬರೆ ಕಾಮಗಾರಿ ಪೂರ್ಣಗೊಳಿಸಲು ಪಂಚಾಯತ್‌ಗೆ, ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಇದ್ದೇವೆ. ಕೇಳಿದರೆ ನಮಗೆ ಗೊತ್ತಿಲ್ಲ. ಅದು ಹೈವಯವರು, ಐಆರ್‌ಬಿಯವರು ಮಾಡಬೇಕು ಎನ್ನುತ್ತಾರೆ. ಈ ಬಗ್ಗೆ ಗಮನಹರಿಸಿ, ಮಾಡಿಸಬೇಕಾದವರು ಯಾರು? ಚರಂಡಿಯಿಲ್ಲದೆ ನಮ್ಮ ಕಡೆಗೆ ಬರುವ ರಸ್ತೆ ಪೂರ್ತಿ ಹೊಂಡ ಬಿದ್ದು, ವಾಹನ ಬರಲು ಸಮಸ್ಯೆಯಾಗುತ್ತಿದೆ. ಕೃಷಿಗೂ ಅಪಾರ ಹಾನಿಯಾಗುತ್ತಿದೆ. – ಗೋಪಾಲ್‌ ಆಚಾರ್‌ ತ್ರಾಸಿ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next