ಮಂಗಳೂರು: ಪೊಲೀಸ್ ಸೋಗಿನಲ್ಲಿ ನಟಿಯೋರ್ವಳ ತಾಯಿ ಬಳಿಯಿಂದ ಸಾವಿರಾರು ರೂ. ಸುಲಿಗೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಸಾಜ್ ಪಾರ್ಲರ್ ಇಟ್ಟುಕೊಂಡಿದ್ದ ನಟಿಯೋರ್ವಳ ತಾಯಿ ಅದನ್ನು ಮುಚ್ಚಿದ್ದರು.
ಅವರ ಮನೆಗೆ ಪೊಲೀಸ್ ಸಮವಸ್ತ್ರದ ವೇಷದಲ್ಲಿ ತೆರಳಿದ ವ್ಯಕ್ತಿ ತಾನು ಪಾಂಡೇಶ್ವರ ಠಾಣೆಯ ಪೊಲೀಸ್ ಎಂದು ಪರಿಚಯಿಸಿಕೊಂಡು “ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ. ದಂಧೆ ನಡೆಸುತ್ತಿರುವುದು ಸಾಹೇಬರಿಗೆ ಗೊತ್ತಾಗಿದೆ. ಸಾಹೇಬರ ಜತೆ ಸಹಕರಿಸಿದರೆ ದಂಧೆಗೆ ತೊಂದರೆ ಆಗುವುದಿಲ್ಲ. ಗೂಗಲ್ ಪೇ ಮಾಡಿದರೆ ರೈಡ್ ಮಾಡುವುದಿಲ್ಲ” ಎಂದು ಬೆದರಿಕೆ ಹಾಕಿ ಹೋಗಿದ್ದ.
ಆ ಬಳಿಕ ಕರೆ ಮಾಡಿದ ವ್ಯಕ್ತಿ “ನಿಮ್ಮ ಮನೆಯಲ್ಲಿ ಚಿನ್ನಾಭರಣ, ಹಣ ಇದೆ ಎಂದು ದೂರು ಬಂದಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡಬೇಕು ಇಲ್ಲವಾದರೆ ಪೊಲೀಸರು ದಾಳಿ ಮಾಡುತ್ತಾರೆ” ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ಹತ್ತಿರದ ಮೊಬೈಲ್ ಶಾಪ್ಗೆ ಹೋಗಿ ಗೂಗಲ್ ಪೇ ಮೂಲಕ 18 ಸಾವಿರ ರೂ. ವರ್ಗಾಯಿಸಿದ್ದಾರೆ.
ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ, ಫೈಲ್ ಪೊಲೀಸ್ ಆಯುಕ್ತರ ಕಚೇರಿಗೂ ಹೋಗಿದೆ, ಪ್ರಕರಣವನ್ನು ಮುಚ್ಚಿ ಹಾಕಲು ಹಣ ನೀಡಬೇಕು. ಇಲ್ಲವಾದರೆ ಆಯುಕ್ತರು ಮಾಧ್ಯಮದವರೊಂದಿಗೆ ಮನೆಗೆ ಬರುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ. ಹೆದರಿಕೊಂಡ ಮಹಿಳೆ ಮೊಬೈಲ್ ಶಾಪ್ಗೆ ಹೋಗಿ 20 ಸಾವಿರ ರೂ.ಗಳನ್ನು ಗೂಗಲ್ ಪೇ ಮಾಡಿದ್ದಾರೆ. ಹೀಗೆ ಒಟ್ಟು 38 ಸಾವಿರ ರೂ. ಹಣವನ್ನು ನಕಲಿ ಪೊಲೀಸ್ ನೀಡಿದ ಸಂಖ್ಯೆಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ.