Advertisement
ಮಧುಗಿರಿ ಕ್ಷೇತ್ರದ ಶಾಸಕ, ವಿಧಾನಧಿಸಭಾ ಭರವಸೆ ಈಡೇರಿಕೆ ಸಮಿತಿಯ ಕೆ. ಎನ್. ರಾಜಣ್ಣ ಅವರ ನೇತೃತ್ವದಲ್ಲಿ ಮಧುಗಿರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಧುಗಿರಿ ವಿಧಾನಸಭಾ ಕ್ಷೇತ್ರದ ಜನರನ್ನು ಎತ್ತಿನಹೊಳೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಕರೆತರಲಾಗಿತ್ತು. ಬಸ್, ಕ್ರೂಸರ್ ಜೀಪು, ಟೆಂಪೋ ಟ್ರಾವೆಲರ್, ಇನ್ನೋವಾ ಸೇರಿದಂತೆ 280ರಷ್ಟು ವಾಹನಗಳಲ್ಲಿ ಬೆಳಗ್ಗೆ ಮಧುಗಿರಿಯಿಂದ ಹೊರಟ ಮಂದಿಗೆ ಹಾಸನದ ಶಾಂತಿಗ್ರಾಮದಲ್ಲಿ ಊಟದ ಏರ್ಪಾಟು ಮಾಡಲಾಗಿತ್ತು. ಅನಂತರ ಸಕಲೇಶಪುರದ ಎತ್ತಿನಹೊಳೆಯಲ್ಲಿ ನಡೆಯುತ್ತಿರುವ 12,900 ಕೋ.ರೂ.ಗಳ ಕಾಮಗಾರಿ ವೀಕ್ಷಣೆಗೆ ಅವಕಾಶ ನೀಡಲಾಯಿತು. ಅಲ್ಲಿಂದ ಸಂಜೆ 3.30ರ ನಂತರ ಹತ್ತಾರು ವಾಹನಗಳು ಧರ್ಮಸ್ಥಳ ತಲುಪಿದವು.ಶಾಸಕ ಕೆ.ಎನ್. ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ನಗರ ಸಭಾ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಜಿ.ಪಂ. ಸದಸ್ಯರಾದ ಶಾಂತಲಾ ರಾಜಣ್ಣ, ಜಿ.ಜೆ. ರಾಜಣ್ಣ, ತಾ.ಪಂ. ಅಧ್ಯಕ್ಷೆ ಇಂದಿರಾ ದೇವಾನಾೖಕ್ ಮೊದಲಾದವರು ಇದ್ದರು.
ನಗರಸಭೆ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ, ನಮ್ಮಲ್ಲಿ ಎಷ್ಟು ಕೊರೆದರೂ ನೀರಿಲ್ಲ. ಸದಾ ಬರದ ಸ್ಥಿತಿ ಇದೆ. ಮಳೆ ಇಲ್ಲ. ಜಾನುವಾರುಗಳಿಗೆ ಮೇವಿಲ್ಲ. ಜನರಿಗೆ ನೀರಿಲ್ಲ. ದ.ಕ.ದಲ್ಲಿ ಹರಿದು ಪೋಲಾಗುವ, ಸಮುದ್ರ ಸೇರುವ ನೀರನ್ನಷ್ಟೇ ನಮಗೆ ಬೊಗಸೆಯಲ್ಲಾದರೂ ಭಿಕ್ಷೆಯ ರೂಪದಲ್ಲಾದರೂ ಕುಡಿಯಲು ಕೊಡಿ ಎಂದು ಕೇಳುತ್ತಿದ್ದೇವೆ ಎಂದರು. ಕಾಮಗಾರಿ ವೀಕ್ಷಿಸಿದಾಗ ಅಲ್ಲಿ 24 ಟಿಎಂಸಿ ನೀರು ಇರದು ಎಂದು ನಿಮಗೆ ಅನಿಸಿಲ್ಲವೇ ಎಂದು ಪ್ರಶ್ನಿಸಿದಾಗ ಮುಂದಾದರೂ ಮಳೆ ಬಂದು ಅಲ್ಲಿ ನೀರು ಸಂಗ್ರಹವಾಗಿ ನಮಗೆ ದೊರೆಯಲಿ ಎಂದಷ್ಟೇ ನಮ್ಮ ಪ್ರಾರ್ಥನೆ. ಧರ್ಮಸ್ಥಳ ದೇವರಲ್ಲಿ ಕೂಡ ನಾವು ಅದನ್ನೇ ಪ್ರಾರ್ಥಿಸುವುದು, ಒಳ್ಳೆ ಮಳೆಯಾಗಿ ನಮಗೆ ನೀರು ದೊರೆಯಲಿ ಎಂದರು.
Related Articles
ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಶಿಕಿರಣ್ ಜೈನ್, ಹರೀಶ್ ಪೂಂಜಾ, ಕಿರಣ್ ಶೆಟ್ಟಿ ಮೊದಲಾದವರ ನಿಯೋಗ ಮಧುಗಿರಿಯಿಂದ ಆಗಮಿಸಿದವರನ್ನು ದಿಢೀರ್ ಭೇಟಿ ಮಾಡಿತು. ಎತ್ತಿನಹೊಳೆ ಕಾಮಗಾರಿಯೇ ಬೋಗಸ್. ಇಲ್ಲಿ ನೇತ್ರಾವತಿಯಲ್ಲಿಯೇ ನೀರಿಲ್ಲ. ಇನ್ನು ಕಾಮಗಾರಿ ಪ್ರದೇಶದಲ್ಲಿ 24 ಟಿಎಂಸಿ ದೊರೆಯಲು ಹೇಗೆ ಸಾಧ್ಯ. ಕುಡಿಯುವ ನೀರು ಕೊಡಲು ದ.ಕ. ಜನ ವಿರೋಧ ಅಲ್ಲ. ಇಲ್ಲದ ನೀರಿಗಾಗಿ ಹಣ ಪೋಲು ಮಾಡುತ್ತಿರುವ ಕುರಿತು ಮಾತ್ರ ಆಕ್ಷೇಪ. ದ.ಕ. ಹಾಗೂ ಇತರ ಜಿಲ್ಲೆಗಳ ಜನರ ನಡುವೆ ಮನಸ್ತಾಪದ ಅಗತ್ಯವಿಲ್ಲ. ಹೊಂದಾಣಿಕೆ ಮೂಲಕ ಮಾಹಿತಿ ನೀಡುವ ಕಾರ್ಯ ಸರಕಾರದಿಂದ ಆಗುತ್ತಿಲ್ಲ ಎಂದು ಮನವರಿಕೆ ಮಾಡಲಾಯಿತು.
Advertisement
ಮಳೆ ಬಂತುಸಾವಿರಾರು ಮಂದಿ ಎತ್ತಿನಹೊಳೆ ಪ್ರದೇಶದಲ್ಲಿ ವೀಕ್ಷಣೆಗೆ ಇಳಿದಾಗ ಅಚಾನಕ್ ಆಗಿ ಮಳೆ ಬಂತು. ಆಗಮಿಸಿದವರಿಗೆ ಹರ್ಷ ತಂದಿತು. ಇದೇ ರೀತಿ ಮಳೆಯಾಗಿ ನೀರು ಉಕ್ಕಿ ಹರಿಯಲಿ ಎಂದು ಪ್ರಾರ್ಥಿಸಿದರು. ಪೊಲೀಸ್ ಬಂದೋಬಸ್ತ್
ಸಾವಿರಾರು ಮಂದಿ ಒಮ್ಮೆಲೇ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಪ್ರದೇಶದಿಂದ ಧರ್ಮಸ್ಥಳ ವರೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.