Advertisement

ಪುಟ್ಟ ಮನೆಯಲ್ಲಿದೆ ಸಾವಿರಕ್ಕೂ ಅಧಿಕ ಹಳೆಯ ವಸ್ತುಗಳು!

06:51 AM Apr 23, 2019 | mahesh |

ಬೆಳ್ತಂಗಡಿ: ಬದುಕಿನಲ್ಲಿ ಒಬ್ಬೊಬ್ಬರು ಒಂದೊಂದು ಹವ್ಯಾಸಗಳನ್ನು ಹೊಂದಿರುತ್ತಾರೆ. ಅದರಲ್ಲೂ ಒಳ್ಳೆ ಹವ್ಯಾಸಕ್ಕಿಂತಲೂ ಕೆಟ್ಟ ಹವ್ಯಾಸ ಗಳನ್ನು ಹೊಂದಿರುವವರೇ ಹೆಚ್ಚು. ಇವರ ಮಧ್ಯೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದಲ್ಲೊಬ್ಬರು ದೂರದೂರು ಗಳಿಂದ ಹಳೆಯ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟು ಕೊಳ್ಳುತ್ತಿದ್ದಾರೆ. ಇಂತಹ ವಸ್ತುಗಳನ್ನು ದುಡ್ಡು ಕೊಟ್ಟೇ ಸಂಗ್ರಹಿಸುವುದು ಇವರ ವಿಶೇಷತೆಯಾಗಿದೆ!

Advertisement

ಕೊಯ್ಯೂರು ಗ್ರಾಮದ ಆದೂರುಪೆರಾಲ್‌ ನಿವಾಸಿ ಹಳ್ಳಿಮನೆ ಹೈದರಾಲಿ ಈ ಅಪರೂಪದ ಸಾಧಕ. ತನ್ನ 13ನೇ ವಯಸ್ಸಿನಲ್ಲಿ ನದಿಯಲ್ಲಿ ಸಿಗುವ ಅಪರೂಪದ ಕಲ್ಲುಗಳ ಸಂಗ್ರಹ, ಚಾಕಲೇಟ್‌ ಪ್ಯಾಕೇಟ್‌ಗಳ ಸಂಗ್ರಹದ ಮೂಲಕ ಹುಟ್ಟಿಕೊಂಡ ಆಸಕ್ತಿ ಪ್ರಸ್ತುತ ಅವರ ವಯಸ್ಸು 61 ದಾಟಿದ್ದು, ಇಂದು ಅವರ ಬಳಿ ಸಾವಿರಕ್ಕೂ ದಾಟಿದ ಹಳೆಯ ವಸ್ತುಗಳಿವೆ.

ಸಾಕಷ್ಟು ವಸ್ತುಗಳನ್ನು ಇವರು ಬೆಂಗಳೂರು ಸಂಡೇ ಬಜಾರ್‌ನಿಂದ ಸಂಗ್ರಹಿಸಿದ್ದು, ಉಳಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳು, ತಮಿಳುನಾಡು, ಕೇರಳ ಮೊದಲಾದ ಭಾಗಗಳಿಂದ ಸಂಗ್ರಹಿಸಿಟ್ಟಿದ್ದಾರೆ. ಕೆಲವೊಂದು ಕಡೆ ತನ್ನ ಮೊಬೈಲ್‌ ನಂಬರ್‌ ಕೊಟ್ಟು ಬರುತ್ತಿದ್ದು, ಹಳೆ ವಸ್ತುಗಳಿದ್ದರೆ ಅಲ್ಲಿಂದ ಕರೆ ಬರುತ್ತದೆ.

20 ಲಕ್ಷಕ್ಕೂ ಅಧಿಕ ಸೊತ್ತುಗಳು
ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಹೈದರಾಲಿಗೆ ಊರವರೇ ಹಳ್ಳಿಮನೆ ಹೈದರಾಲಿ ಬಿರುದು ನೀಡಿದ್ದಾರೆ. ಮದುವೆಯಾದ ಬಳಿಕ ಅವರು ಬೆಳ್ತಂಗಡಿಗೆ ಆಗಮಿಸಿದ್ದು, ಕಳೆದ 25 ವರ್ಷಗಳಿಂದ ಆದೂರ್‌ಪೆರಾಲಿನಲ್ಲಿ ವಾಸಿಸುತ್ತಿದ್ದಾರೆ. 7 ಸೆಂಟ್ಸ್‌ ಜಾಗದಲ್ಲಿ ಅವರ ಪುಟ್ಟ ಮನೆಯಿದ್ದು, ಅದೇ ಮನೆಯಲ್ಲಿ ಸುಮಾರು 20 ಲಕ್ಷ ರೂ.ಗಳಿಗಿಂತಲೂ ಅಧಿಕ ಮೊತ್ತದ ಎಲ್ಲಾ ವಸ್ತುಗಳನ್ನು ಬಾಕ್ಸ್‌ಗಳಲ್ಲಿ ತುಂಬಿಸಿಟ್ಟಿದ್ದಾರೆ.

ಒಟ್ಟು 20 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಹಳೆಯ ವಸ್ತುಗಳಿದ್ದು, ಹಳೆಯ ಕಾಲದ ರೇಡಿಯೋಗಳು, ಗ್ರಾಮಫೋನ್‌, ಹಳೆಯ ಡಿವಿಡಿ, ವಿಸಿಆರ್‌, 90 ರಾಷ್ಟ್ರಗಳ ನೋಟು, ನಾಣ್ಯಗಳು, ಕೃಷಿ ಉಪಕರಣಗಳು, ಪಿಚ್ಚರ್‌ ಮೆಷಿನ್‌ಗಳು, ಹ್ಯಾಂಡ್‌ ಜೆರಾಕ್ಸ್‌ ಹೀಗೆ ನೂರಾರು ಬಗೆಯ ಹಳೆಯ ವಸ್ತುಗಳು ಇವರ ಸಂಗ್ರಹದಲ್ಲಿವೆ.

Advertisement

ಭಾರತಕ್ಕೆ ಫಿಲ್ಮ್ ಬಂದಾಗ ಅದನ್ನು ಪ್ಲೇ ಮಾಡುತ್ತಿದ್ದ ಮೆಷಿನ್‌ ಹಾಗೂ ಹ್ಯಾಂಡ್‌ ಜೆರಾಕ್ಸ್‌ ಮೆಷಿನನ್ನು ಒಟ್ಟು 33 ಸಾವಿರ ರೂ. ಕೊಟ್ಟು ಚಿಕ್ಕಮಗಳೂರಿನಿಂದ ತಂದಿದ್ದಾರೆ. ಕೆಲವು ಹಳೆಯ ವಸ್ತುಗಳಿಗಾಗಿ ಮುಂದೆ ಚಿತ್ರದುರ್ಗಕ್ಕೆ ತೆರಳುತ್ತಿದ್ದಾರೆ.

ಮಗಳಿಗೆ ವಿಲ್‌ ಬರೆದಿದ್ದಾರೆ!
ತನ್ನ ಬಳಿಕ ತಾನು ಸಂಗ್ರಹಿಸಿದ ವಸ್ತುಗಳು ಯಾರಿಗೆ ಎಂಬ ಸಮಸ್ಯೆ ಬರಬಾರದು ಎಂಬ ಕಾರಣಕ್ಕೆ ಈಗಾಗಲೇ ಈ ವಸ್ತುಗಳ ಕುರಿತು ಆಸಕ್ತಿ ಹೊಂದಿರುವ ತನ್ನ ಕಿರಿಯ ಪುತ್ರಿ ಫಾತಿಮತ್‌ ರಜಿಯಾ ಆಲಿಯಾ ಅವರಿಗೆ ವಿಲ್‌ ಬರೆದಿಟ್ಟಿದ್ದಾರೆ. ತಾನು 13ನೇ ವಯಸ್ಸಿಗೆ ಈ ಆಸಕ್ತಿ ಬೆಳೆಸಿಕೊಂಡಿದ್ದು, ಅದೇ ವಯಸ್ಸಿನಲ್ಲಿ ಮಗಳಿಗೆ ಈ ವಸ್ತುಗಳನ್ನು ವಿಲ್‌ ಮೂಲಕ ಬರೆದುಕೊಟ್ಟಿದ್ದಾರೆ.

ವಿಶೇಷವೆಂದರೆ ಈಕೆಯೂ ಕೂಡ ತನ್ನ ವಿದ್ಯಾರ್ಥಿ ವೇತನದ 10 ಶೇ.ವನ್ನು ಇಂತಹ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಹಳೆಯ ವಸ್ತುಗಳ ಕುರಿತು ಇತರ ಮೂವರು ಪುತ್ರಿಯರು ಕೂಡ ಆಸಕ್ತಿ ಹೊಂದಿದ್ದು, ವಸ್ತು ಪ್ರದರ್ಶನಗಳಿಗೆ ಹೋಗುವ ಸಂದರ್ಭ ತಂದೆಯ ಜತೆ ಇಂದಿಬ್ಬರು ತೆರಳುತ್ತಾರೆ.

 ಮುಂದುವರಿಸುವ ಉದ್ದೇಶ
ನಮ್ಮ ಪೂರ್ವಜರು ಉಪಯೋಗಿಸುವ ವಸ್ತುಗಳನ್ನು ಮುಂದಿನ ಪೀಳಿಗೆಯವರು ಕೂಡ ನೋಡಬೇಕೆಂಬ ಉದ್ದೇಶದಿಂದ ತಂದೆಯವರು ಆರಂಭಿಸಿರುವ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದೇನೆ. ಅವರು ಸಂಗ್ರಹಿಸಿರುವ ಎಲ್ಲ ಹಿನ್ನೆಲೆಯನ್ನು ತಿಳಿದುಕೊಂಡು ಅದನ್ನು ಪ್ರದರ್ಶನಗಳಿಗೆ ಆಗಮಿಸುವವರಿಗೆ ವಿವರಿಸುವಷ್ಟು ಮಾಹಿತಿಯನ್ನೂ ತಿಳಿದುಕೊಂಡಿದ್ದೇನೆ.
ಹಳ್ಳಿಮನೆ ಫಾತಿಮತ್‌ ರಜಿಯಾ ಆಲಿಯಾ ಹೈದರಾಲಿ ಅವರ ಪುತ್ರಿ.

ಶೇ. 20 ಸಮಾಜಕ್ಕೆ ಬಳಕೆ
ಹಿಂದೆ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಹೈದರಾಲಿ ಅವರು ಅಂದಿನಿಂದಲೂ ತನ್ನ ದುಡಿಮೆಯ ಶೇ. 20ನ್ನು ಸಮಾಜಕಾರ್ಯಕ್ಕೆ ಬಳಸುತ್ತಿದ್ದಾರೆ. ಈಗಾಗಲೇ ಸುಮಾರು 7 ಶಾಲೆಗಳಿಗೆ ವಿದ್ಯಾರ್ಥಿಗಳ ಸಹಕಾರದಿಂದ ತನ್ನ ಖರ್ಚಿನಿಂದಲೇ ಧ್ವಜಸ್ತಂಭ ನಿರ್ಮಿಸಿಕೊಟ್ಟಿದ್ದಾರೆ.

ನೆರವು ಸಿಕ್ಕರೆ ಉತ್ತಮ
ತನ್ನ 13ನೇ ವಯಸ್ಸಿನಲ್ಲಿ ಈ ಕಾಯಕ ಆರಂಭಿಸಿದ್ದು, ಪ್ರಸ್ತುತ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಹೀಗಾಗಿ ಪ್ರಸ್ತುತ ಎಲ್ಲ ವಸ್ತುಗಳನ್ನು ಸಣ್ಣ ಮಗಳ ಹೆಸರಿಗೆ ಬರೆದುಕೊಟ್ಟಿದ್ದೇನೆ. ಹಳೆಯ ವಸ್ತುಗಳನ್ನು ಇಡುವುದಕ್ಕೆ ಮನೆಯಲ್ಲಿ ಜಾಗದ ಕೊರತೆ ಇದ್ದು, ಸರಕಾರ ನೆರವು ನೀಡಿದರೆ ಗೋದಾಮೊಂದನ್ನು ನಿರ್ಮಿಸುವ ಉದ್ದೇಶವಿದೆ.
ಹಳ್ಳಿಮನೆ ಹೈದರಾಲಿ ಹಳೆವಸ್ತು ಸಂಗ್ರಾಹಕ

  •  ಕಿರಣ್‌ ಸರಪಾಡಿ
Advertisement

Udayavani is now on Telegram. Click here to join our channel and stay updated with the latest news.

Next