ಚೆನ್ನೈ : ಇಲ್ಲಿನ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ನಿಷೇಧದ ತೆರವಿಗೆ ಯುವಕರ ಒಂದು ಸಣ್ಣ ಗುಂಪು ಆರಂಭಿಸಿದ್ದ ಪ್ರತಿಭಟನೆಯು ಇದೀಗ ಬೃಹತ್ ರೂಪ ತಳೆದಿದ್ದು ಸಹಸ್ರಾರು ಜನರು ಇದನ್ನು ಸೇರಿಕೊಂಡಿದ್ದಾರೆ.
ಜಲ್ಲಿಕಟ್ಟು ಆಂದೋಲನವು ಈಗ ತಮಿಳರ ಸಾಂಸ್ಕೃತಿಕ ಸ್ವಾಭಿಮಾನವಾಗಿ ಪರಿವರ್ತಿತವಾಗಿದ್ದು ಪೊಂಗಲ್ ಸಂದರ್ಭದಲ್ಲಿ ನಡೆಯುವ ಈ ಸಾಂಪ್ರದಾಯಿಕ ಕ್ರೀಡೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಸರಕಾರದ ಮೇಲಿನ ಒತ್ತಡವು ಹೆಚ್ಚುತ್ತಿದೆ.
ಮರೀನಾ ಬೀಚ್‌ನಲ್ಲಿ ನಡೆದಿರುವ ಜಲ್ಲಿಕಟ್ಟು ಪ್ರತಿಭಟನೆಗೆ ಯಾವುದೇ ನಿರ್ದಿಷ್ಟ ನಾಯಕನಿಲ್ಲ. ಹಾಗಿದ್ದರೂ ಜನರು ಈ ಪ್ರತಿಭಟನಾ ತಾಣದಿಂದ ಹಿಂದೆ ಸರಿಯುತ್ತಿಲ್ಲ. ಪರಿಣಾಮವಾಗಿ ತಮಿಳು ನಾಡು ಸರಕಾರ ಈಗ ಕೇಂದ್ರವನ್ನು ಸಂಪರ್ಕಿಸಿದ್ದು ಪ್ರತಿಭಟನೆಯ ಕಾವನ್ನು ಶಮನಗೊಳಿಸುವುದಕ್ಕೆ ನೆರವಾಗುವಂತೆ ಕೋರಿದೆ.
ಇದೇ ವೇಳೆ ತಮಿಳು ನಾಡು ಸರಕಾರ ಪ್ರತಿಭಟನಕಾರರನ್ನು ಕೂಡ ಸಂಪರ್ಕಿಸಿದ್ದು ಜಲ್ಲಿಕಟ್ಟು ಮೇಲಿನ ನಿಷೇಧದ ತೆರವಿಗೆ ಮತ್ತು ಅಧ್ಯಾದೇಶದ ಜಾರಿಗೆ ತಾನು ಅವಶ್ಯವಿದ್ದಲ್ಲಿ ರಾಷ್ಟ್ರಪತಿಯವರನ್ನು ಕೂಡ ಸಂಪರ್ಕಿಸುವುದಾಗಿ ಭರವಸೆ ನೀಡಿದೆ.
ರಾಜ್ಯ ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಕೆ ಪಾಂಡ್ಯರಾಜನ್ ಅವರೊಂದಿಗೆ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಿರತ ಯುವಕರ ಜತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಪ್ರತಿಭಟನಕಾರರು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರಿಂದ ನಿಖರ ಆಶ್ವಾಸನೆ ಸಿಗದೆ ತಾವು ಸ್ಥಳದಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಸರಕಾರ ಈ ಸಂಬಂಧ ತಾನು ಯಾವುದೇ ಮೌಖೀಕ ಭರವಸೆ ನೀಡುವುದಿಲ್ಲ; ಆದರೆ ದಿನಾಂತ್ಯದ ಒಳಗೆ ಮುಖ್ಯಮಂತ್ರಿಗಳಿಂದ ಈ ಸಂಬಂಧ ಹೇಳಿಕೆಯನ್ನು ಹೊರಡಿಸುವುದಾಗಿ ಪ್ರತಿಭಟನಕಾರರಿಗೆ ಹೇಳಿದೆ.