ಹಾನಗಲ್ಲ: ಭೀಕರ ಮಳೆ-ನೆರೆ ಹಾವಳಿಯಿಂದತತ್ತರಿಸಿದ ಸಂತ್ರಸ್ತರಿಗೆ ಪರಿಹಾರ ನೀಡುವುದರ ನಡುವೆಯೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ನೂರು ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಹಾವೇರಿ ಲೋಕಸಭಾ ವ್ಯಾಪ್ತಿಗೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ನೆಲ್ಲಿಕೊಪ್ಪ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಉದ್ಘಾಟನೆ ಮತ್ತು ಚಾಲನೆ ನೀಡಿದ ಅವರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಯೋಜನೆ ನೀಡಿದ್ದಾರೆ. ತಾಲೂಕಿಗೆ ಅತ್ಯಂತ ಅವಶ್ಯವಾಗಿರುವ 2 ನೀರಾವರಿ ಯೋಜನೆಗಳು ಮಂಜೂರಾಗಿವೆ. ಇದಕ್ಕಾಗಿ ಮೊದಲ ಕಂತು ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಸಿಎಂ ಬಿಎಸ್‌ವೈ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ಬೊಮ್ಮನಹಳ್ಳಿ ಜಿಪಂ ಕ್ಷೇತ್ರದ ಎಲ್ಲ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಗೆ ಹಸಿಮೆಣಸಿನಕಾಯಿ ಬೆಳೆಗೆ ವಿಮಾ ಪರಿಹಾರ 702 ಜನ ರೈತರಿಗೆ 2.01 ಕೋಟಿ ಪರಿಹಾರ ಮಂಜೂರಾಗಿದೆ. ತಾಲೂಕಿನ 60 ರೈತರಿಗೆ 11.28 ಲಕ್ಷ ರೂ. ವಿಮಾ ಪರಿಹಾರ ಸಿಗಲಿದೆ. ಇದರೊಂದಿಗೆ ಮಾವಿಗೆ ವಿಮಾ ಯೋಜನೆಯಲ್ಲಿ ಜಿಲ್ಲೆಗೆ 9 ಕೋಟಿ, ತಾಲೂಕಿನ 1699 ರೈತರಿಗೆ 8 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ.
ಪ್ರಕೃತಿ ವಿಕೋಪ ಪರಿಹಾರದಲ್ಲಿ ಹಿಂದಿನ ಯಾವ ಅತಿವೃಷ್ಟಿ ಅವಧಿಯಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದ ಪರಿಹಾರವನ್ನು ಬೇರಾವ ರಾಜ್ಯದಲ್ಲೂ ಘೋಷಿಸಿಲ್ಲ. ಈಗ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಲಾಗುತ್ತಿರುವುದು ಸರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ, ಗ್ರಾಪಂ ಅಧ್ಯಕ್ಷೆ ಕವಿತಾ ಹಾವಣಗಿ, ಉಪಾಧ್ಯಕ್ಷೆ ಗೀತಾ ಚಿಕ್ಕಣಗಿ, ಎಪಿಎಂಸಿ ಅಧ್ಯಕ್ಷೆ ಶೇಖಣ್ಣ ಮಹರಾಜಪೇಟೆ, ಅಜ್ಜಪ್ಪ ಮಲ್ಲಮ್ಮನವರ, ಬಸನಗೌಡ ಪಾಟೀಲ, ಪಕ್ಕೀರಪ್ಪ ಜಿಗಳಿಕೊಪ್ಪ, ಪ್ರಶಾಂತ ಸುಕಾಲಿ, ರೇಣವ್ವ ಸವಣೂರ, ಅಂಜಕ್ಕ ರಜಪೂತ, ಸರೋಜಾ ಕಮ್ಮಾರ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಜೋಗಿ ಇದ್ದರು.