Advertisement

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರ ಪಾದ ಯಾತ್ರೆ

09:03 PM Feb 17, 2020 | Lakshmi GovindaRaj |

ಚನ್ನರಾಯಪಟ್ಟಣ: ಮಹಾ ಶಿವರಾತ್ರಿಯಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆಯಲು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಳೆದ ಒಂದು ವಾರದಿಂದ ಸಾವಿರಾರು ಮಂದಿ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.

Advertisement

ದೇವರ ನಾಮ ಸ್ಮರಣೆ: ಬೆಂಗಳೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಯ ಅನೇಕ ತಾಲೂಕುಗಳಿಂದ ಪಾದಯಾತ್ರೆ ಕೈಗೊಂಡಿರುವವರು ಕೇಸರಿ ವಸ್ತ್ರ ಧಾರಿಗಳಾಗಿ ಪ್ರತಿ ಹೆಜ್ಜೆಯನ್ನೂ ಮಂಜುನಾಥನ ಜಪ ಮಾಡುತ್ತ ಹಾಕುತ್ತಿದ್ದರೆ ಇನ್ನು ಹಲವು ಮಂದಿ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ದೇವರನ್ನು ಸ್ಮರಿಸುತ್ತಿದ್ದಾರೆ.

ತಾಲೂಕಿನಿಂದ 1,200 ಭಕ್ತರು: ಚನ್ನರಾಯಪಟ್ಟಣದ ದಂಡಿಗನಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ ಬಾಗೂರು, ಕಸಬಾ ಹೋಬಳಿಯ ಹಾಗೂ ಪಟ್ಟಣದಿಂದ 1,200ಕ್ಕೂ ಅಧಿಕ ಮಂದಿ ಪಾದಯಾತ್ರೆ ಕೈಗೊಂಡಿದ್ದಾರೆ.

ಉಚಿತ ಹಣ್ಣು, ನೀರು ಮಜ್ಜಿಗೆ ವಿತರಣೆ: ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವವರಿಗೆ ಹೆದ್ದಾರಿ ಬದಿಯಲ್ಲಿ ಇರುವ ಅನೇಕ ಗ್ರಾಮಗಳ ಮುಖಂಡರು, ಸಂಘ ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಬಾಳೆಹಣ್ಣು, ಕಿತ್ತಳೆ ಹಣ್ಣು, ಕುಡಿಯುವ ನೀರು, ಮಜ್ಜಿಗೆ ನೀಡಿ ಸತ್ಕರಿಸುತ್ತಿದ್ದಾರೆ.

ಉರಿ ಬಿಸಿಲಿನಲ್ಲಿಯೂ ಯಾತ್ರೆ: ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರು ಬೆಳಗ್ಗೆ ಹಾಗೂ ಸಂಜೆ ತಂಪು ಹೊತ್ತಿನಲ್ಲಿ ಮಾತ್ರ ಯಾತ್ರೆ ಮಾಡುತ್ತಿಲ್ಲ, ಬಿಸಿಲ ಝಳದಲ್ಲಿಯೂ ತಮ್ಮ ಯಾತ್ರೆಯನ್ನು ಕೈಗೊಂಡಿದ್ದಾರೆ. ಹಲವು ಮಂದಿ ತಮ್ಮ ಚಿಕ್ಕ ಮಕ್ಕಳನ್ನು ಹೊತ್ತು ಸಾಗುತ್ತಿದ್ದಾರೆ. ಇನ್ನು ಅನೇಕರು ಕಾಲಿಗೆ ಪಾದರಕ್ಷೆಯನ್ನು ಹಾಕಿಕೊಳ್ಳದೇ ಸಾಗುತ್ತಿದ್ದಾರೆ.

Advertisement

ರಸ್ತೆ ಬದಿ ಮರದ ನೆರಳು ಆಶ್ರಯ: ನೂರಾರು ಕಿ.ಮೀ. ವರೆಗೆ ನಡೆಯುವ ಭಕ್ತರಿಗೆ ಆಯಾಸವಾದಾಗ ರಸ್ತೆ ಬದಿಯಲ್ಲಿ ಇರುವ ಮರದ ನೆರಳನ್ನು ಆಶ್ರಯ ಮಾಡಿಕೊಳ್ಳುತ್ತಿರುವುದಲ್ಲದೇ ಹೆದ್ದಾರಿ ಸಮೀಪದಲ್ಲಿ ಸಮುದಾಯ ಭವನ, ಮನೆಯ ಜಗುಲಿ ಹಾಗೂ ಆವರಣದಲ್ಲಿ ವಿಶ್ರಾಂತಿ ಪಡೆದು ದಣಿವಾರಿಸಿಕೊಂಡ ನಂತರ ಮುಂದಕ್ಕೆ ಸಾಗುತ್ತಿರುವ ದೃಷ್ಯಗಳು ಕಾಣಸಿಗುತ್ತವೆ.

ಹರಕೆ ಹೊತ್ತವರೇ ಹೆಚ್ಚು: ಯಾವುದೇ ವಯೋಮಿತಿ ಇಲ್ಲದೇ ಪಾದಯಾತ್ರೆಯಲ್ಲಿ ಪಾಲ್ಗೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಡೆದುಕೊಂಡು ಸಾಗುತಿದ್ದು, ಫೆ.20 ಗುರುವಾರ ಸಂಜೆಯ ವೇಳೆಗೆ ಎಲ್ಲಾ ಭಕ್ತರು ಶ್ರೀಕ್ಷೇತ್ರವನ್ನು ತಲುಪಲಿದ್ದಾರೆ.

ಕಂಕಣ, ಸಂತಾನ ಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜಿನಗಳ ನಿವಾರಣೆ ಸಲುವಾಗಿ ಹರಕೆ ಹೊತ್ತವರು, ಇಷ್ಟಾರ್ಥ ಫ‌ಲಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗಿ ಮುಡಿ ನೀಡುವ ಹರಕೆ ತೀರಿಸಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆಯಲಿದ್ದಾರೆ.

ಕಳೆದ 12 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡು ಶಿವರಾತ್ರಿ ಮಹೋತ್ಸವದಲ್ಲಿ ಮಂಜುನಾಥನ ದರ್ಶನ ಪಡೆಯುತಿದ್ದೇನೆ. ವಿದ್ಯೆ ಹಾಗೂ ಸ್ವ ಉದ್ಯೋಗ ಹೊಂದಿದ್ದು, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತಿದ್ದೇನೆ. ತಾಯಿಯ ಆಶಯದಂತೆ ಈ ಬಾರಿ ಮದುವೆ ವಿಚಾರವಾಗಿ ಹರಕೆ ಹೊತ್ತು ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದೇನೆ.
-ಸುನೀಲ್‌, ಕಣ್ಣೂರು, ಬೆಂಗಳೂರು ಪೂರ್ವ ತಾಲೂಕು

ನಾಸ್ತಿಕನಾಗಿದ್ದ ನಾನು ಯಾವುದೇ ದೇವರು, ಪೂಜೆ ಪುನಸ್ಕಾರವನ್ನು ನಂಬುತ್ತಿರಲಿಲ್ಲ, ಆದರೆ ನನ್ನ ಬದುಕಿನಲ್ಲಿ ಅಸಾಧ್ಯವಾದ ಘಟನೆ ನಡೆದು ಜೀವನ ಮುಗಿಯಿತು ಎನ್ನವ ವೇಳೆಯಲ್ಲಿ ಹಿರಿಯರ ಮಾತಿನಂತೆ ಒಲ್ಲದ ಮನಸ್ಸಿನಿಂದ ಕಳೆದ 15 ವರ್ಷಗಳ ಹಿಂದೆ ಪಾದಯಾತ್ರೆ ಪ್ರಾರಂಭಿಸಿದೆ. ಎಲ್ಲವೂ ಒಳ್ಳೆಯದಾಯಿತು ಹಾಗಾಗಿ ಪಾದಯಾತ್ರೆ ಮೂಲಕ ಮಂಜುನಾಥನ ದರ್ಶನಕ್ಕೆ ತೆರಳುತ್ತಿರುವೆ. ಬದುಕಿರುವವರೆಗೂ ಪಾದಯಾತ್ರೆ ಮುಂದುವರಿಸುತ್ತೇನೆ.
-ಲಕ್ಷ್ಮಣ, ಪಾದಯಾತ್ರಿ, ಚಿಂತಲ ಮಡಿವಾಳ ಗ್ರಾಮ

ಶತಮಾನದ ಹಿಂದೆ ಕಾಶಿಯಾತ್ರೆ ಹೆಸರಿನಲ್ಲಿ ವಯೋವೃದ್ಧರು ಧರ್ಮಿಕ ಕ್ಷೇತ್ರಗಳ ಯಾತ್ರೆ ಮಾಡುತ್ತಿದ್ದು ನಂತರ ಇದು ನಿಂತು ಹೋಯಿತು.ಈಗ ಇತಿಹಾಸ ಮರುಕಳಿಸಿದ್ದು, ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪ್ರತಿ ವರ್ಷವೂ ಸಾವಿರಾರು ಮಂದಿ ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ತೆರಳುತ್ತಾರೆ. ಇವರ ಸೇವೆ ಮಾಡುವುದರಿಂದ ಆ ಭಗವಂತ ನಮಗೂ ಒಳಿತು ಮಾಡಲಿದ್ದಾನೆ.
-ಹೆಸರು ಹೇಳಲಿಚ್ಚಿಸದ, ಹೆದ್ದಾರಿಯಲ್ಲಿ ಪಾದಯಾತ್ರಿಕರಿಗೆ ಹಣ್ಣು ನೀರು ವಿತರಿಸುವ ವ್ಯಕ್ತಿ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next