Advertisement

ಅಮ್ಮ ಹೇಳದ ನೂರೆಂಟು ಅಡುಗೆಗಳು

12:30 AM Mar 11, 2019 | |

ಕಾಡು ಕೃಷಿ ಮಾಡಲು ಹೋಗುವವರಿಗೆ  ಸಸ್ಯ ಬಳಕೆ ಸರಿಯಾಗಿ ಅರ್ಥವಾಗಲು ಅಮ್ಮನ ಅಡುಗೆ ಪಾಠ ಬೇಕು. ಆಹಾರ ಪರಂಪರೆಯ ಪ್ರಾಯೋಗಿಕ ಅನುಭವದ ಇರುವ ಅವರಲ್ಲಿ ಹುಲ್ಲಿನಿಂದ ಹೆಮ್ಮರದವರೆಗೆ ಸಸ್ಯ ಪ್ರೀತಿ ಇದೆ. ಪುರುಷರು ಕುಟುಂಬ ನಿರ್ವಹಣೆಗೆ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಕಾಫಿ, ಬಾಳೆ ತೋಟಗಳಲ್ಲಿ ಪೌರುಷ ಮೆರೆದಿರುವಾಗ ಯಾರೂ ಗಮನಿಸದ ಮರದೆಡೆಯ ಗಿಡತಂದು ಅಡುಗೆ ತಯಾರಿಯಲ್ಲಿ ಆರೋಗ್ಯದ ಪಾಠ ಹೇಳಿ, ನಿತ್ಯದ ಅಚ್ಚರಿ ಹುಟ್ಟಿಸಿದವರು ಅಮ್ಮಂದಿರಲ್ಲವೇ?

Advertisement

ಕಾಡಿನ ಸಸ್ಯ ಬಳಸಿ ಅಡುಗೆ ತಯಾರಿಸುವ ಮಲೆನಾಡಿನ ಪಾರಂಪರಿಕ ಜಾnನದ ಅಧ್ಯಯನ ಸಂದರ್ಭದಲ್ಲಿ ಮಾತೆಯರ ಜೊತೆ ಮಾತುಕತೆ ನಡೆದಿತ್ತು. ಒಮ್ಮೆ ಅಡುಗೆ ಪ್ರಾತ್ಯಕ್ಷಿಕೆ ನಡೆಸುವಂತೆ ಅಜ್ಜಿಯೊಬ್ಬರಿಗೆ ಲಿಖೀತ ಪತ್ರ ನೀಡಿದೆ.  “ನಂಗೆ ಓದೋಕೆ ಬರೋದಿಲ್ಲ, ದುಡ್ಡು ಲೆಕ್ಕ ಹಾಕೋದಕ್ಕೂ ಗೊತ್ತಿಲ್ಲ. ಕುಳಿತಲ್ಲೇ  ವರ್ಷವಾಯೆ¤ಂದು’ ಶಿರಸಿಯ ಹಕ್ರೆಮನೆಯ ಸಾವಿತ್ರಿ(86) ಹೆಗಡೆ ಪತ್ರ ಹಿಡಿದು ನೊಂದು ನುಡಿದಳು. ಪತ್ರದಲ್ಲಿ ಏನಿದೆಯೆಂದು ವಿವರಿಸಿದೆ. ಅಜ್ಜಿ ತಕ್ಷಣ ಕಟಿಪಿಟಿಯಲ್ಲಿ ತೋಟ, ಹಿತ್ತಲು, ಕಾಡಂಚಿನತ್ತ ತೋರಿಸುತ್ತ ಸಸ್ಯಗಳನ್ನು ಒಂದೊಂದಾಗಿ ಪರಿಚಯಿಸಿದಳು. ಆಹಾರ ಔಷಧಕ್ಕೆ ಬಳಸುವ ಸೂಕ್ಷ್ಮ ವಿವರಿಸಿದಳು. ಕೆಂದಿಗೆ ಕುಡಿ, ಹೊನಗೊನೆ, ಹಾಡೇಬಳ್ಳಿ, ಮಂಗಲಕುಡಿ, ಮದ್ದಾಲೆ, ಭದ್ರಮುಷ್ಟಿ, ವಾತಂಗಿ ಎನ್ನುತ್ತ  ಅಕ್ಕರೆಯ ಮನೆ ಮಕ್ಕಳಂತೆ  ಸಸ್ಯಗಳನ್ನು ಹೃದಯಸ್ಪರ್ಶಿಯಾಗಿಸಿದಳು. ಅಜ್ಜಿ ವಿವರಿಸಿದ ಅಡವಿ ಸಸ್ಯಗಳ ಅಡುಗೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಕಡಿದು ಕಿತ್ತೆಸೆಯುವ ವೃಕ್ಷಗಳು ಅಮೂಲ್ಯವಾಗಿ ಕಾಣಿಸಿ ಆಪ್ತವಾಗಿ ಮಾತಾಡಿದವು. ಅಕ್ಷರ ಗೊತ್ತಿಲ್ಲದ ಅಜ್ಜಿ ಅದ್ಬುತವಾಗಿ ಅರಣ್ಯ ಓದಿದ್ದಳು. ಮುಖ್ಯವಾಗಿ, ನಿತ್ಯದ ಬದುಕಿಗೆ ಅತ್ಯಗತ್ಯವಾದ ಆಹಾರ ಜಾnನ ಅರಿತಿದ್ದಳು.

ಸರಗುಪ್ಪದ ವಿಮಲಾ ಜೈನ್‌ ಶಿರಸಿಯ ಕಾಡು ಹಳ್ಳಿಯವರು. ಸೊಣೆ ಹಬ್ಬದ ನೂರೆಂಟು ಕುಡಿಯ ಚಟ್ನಿ ತಯಾರಿ ಕುರಿತು ವಿವರಿಸಿದವರು. ನಾಗರ ಪಂಚಮಿಯ ಹಿಂದಿನ ದಿನ ನಡೆಯುವ ಈ ಹಬ್ಬಕ್ಕೆ ಮನೆಯ ಸುತ್ತಲಿನ ಸಸ್ಯದ ಚಿಗುರು ಸಂಗ್ರಹಿಸಿ ಅಡುಗೆ ತಯಾರಿಸುವ ವಿಶೇಷ ಇವರದು. 108 ಕಾಡು ಸಸ್ಯಗಳನ್ನು ಒಂದು ಚಟ್ನಿ ತಯಾರಿಕೆಯಲ್ಲಿ ಬಳಸುವ ಪರಿಜಾnನ ಹಿರಿಯರಿಂದ ಸಾಗಿ ಬಂದಿದೆ. ವೇದಮಂತ್ರ ಕಲಿಯುವಾಗ ಕಂಠಸ್ಥ ಜಾnನವನ್ನು ಘನಪಾಠಿ’ ಎಂದು ಗುರುತಿಸುತ್ತೇವೆ. ಗ್ರಂಥದ ಅಗತ್ಯವಿಲ್ಲದೇ ನೆನಪಿನಲ್ಲಿ ಉಳಿದು ಬೆಳೆಯುವ ಘನವಿದ್ಯೆಯಾಗಿ ವಿಮಲಾ ಜೈನ್‌ರಲ್ಲಿ ಸಸ್ಯ ಬಳಕೆ ಉಳಿದಿದೆ.  ಇದರಂತೆ ಬಯಲುಸೀಮೆಯಲ್ಲಿ ಬೆರಿಕೆ ಸೊಪ್ಪಿನ ಅಡುಗೆ ಚಿರಪರಿಚಿತ. ಹೀಗೆ ರಾಜ್ಯದ ವಿವಿಧ ಪ್ರದೇಶದ ಅಡುಗೆ ಜಾnನ ಸಂಗ್ರಹಿಸುತ್ತ ಹೋದರೆ ಅಮ್ಮಂದಿರ ಅಡವಿ ಕುರಿತ ಅರಿವು ಅಚ್ಚರಿ ಮೂಡಿಸುತ್ತದೆ. 

ಸಸ್ಯಗಳ ಚಿಗುರು, ಬೇರು, ತೊಗಟೆ, ಹೂವು, ಮೊಗ್ಗು, ಬೀಜ, ಗಡ್ಡೆ ಬಳಸಿ ಕುಟುಂಬದ ಆರೋಗ್ಯವನ್ನು  ಶತಮಾನಗಳಿಂದ ಸಂರಕ್ಷಿಸಿದ ಕೌತುಕವಿದು. ನಿತ್ಯಹರಿದ್ವರ್ಣ ಕಾಡು, ಎಲೆ ಉದುರಿಸುವ ಅರಣ್ಯ, ಕುರುಚಲು ನೆಲೆ, ನದಿಯ ಅಂಚು, ತೋಟ-ಗದ್ದೆಗಳಲ್ಲಿ ಬೆಳೆಯುವ ನೂರಾರು ಸಸ್ಯಗಳು ಬಳಕೆಯಲ್ಲಿದೆ. ಎಲೆಯ ರಾಸಾಯನಿಕ ಅಂಶ ಗಮನಿಸಿ ವಿಷವೆಂದು ಸಸ್ಯಶಾಸ್ತ್ರಜ್ಞರು ಗುರುತಿಸಿದ ಸಸ್ಯಗಳನ್ನು ಸಂಸ್ಕರಣೆಯ ಮೂಲಕ ಅಡುಗೆ ಮನೆಗೆ ಒಗ್ಗಿಸಿದ ರೀತಿ ಇದೆ. ಕೃಷಿ ಕೆಲಸಕ್ಕೆ ಹೋದಾಗ, ಕಟ್ಟಿಗೆ ಹೊರುವಾಗ, ಜಾನುವಾರು ಮೇಯಿಸುವಾಗ, ಕಳೆ ಕೀಳುವ ಕಾಯಕದ ಮಧ್ಯೆ ಉಪಯುಕ್ತ ಸಸ್ಯಭಾಗ ಗುರುತಿಸಿದ್ದಾರೆ. ತಂಬುಳಿ, ಕಷಾಯ, ಗೊಜ್ಜು, ಚಟ್ನಿ, ಸಾರು, ಸಾಂಬಾರು, ಮದ್ದಿನಗಂಜಿ, ಫ‌ಲ್ಯ ವೀಗೆ ವಿವಿಧ ರೀತಿಗಳಲ್ಲಿ ಬಳಸಿದ್ದಾರೆ. ಮಳೆಗಾಲ, ಚಳಿಗಾಲ, ಬೇಸಿಗೆಗೆ ಯೋಗ್ಯ ಸಸ್ಯ ಗುಣ ಅರಿತು ಬದುಕಿದ್ದಾರೆ. ಅಡುಗೆ ತಯಾರಿಯ ಕಲೆಯನ್ನು ಶತಮಾನಗಳಿಂದ ತಲೆಮಾರಿಗೆ ಸುರಕ್ಷಿತವಾಗಿ ಸಾಗಿಸಿ ಬದುಕು ನೀಡಿದ್ದಾರೆ. 

ಅರಣ್ಯ ಇಲಾಖೆಯಲ್ಲಿ “ಜಂಗ್ಲಿ ಜಾತಿಯ….’ ಪದ ಬಳಕೆಯಲ್ಲಿದೆ. ತೇಗ, ಶ್ರೀಗಂಧ, ಹೊನ್ನೆ, ಮತ್ತಿ, ನಂದಿ ವೃಕ್ಷಗಳು ಬೆಲೆ ಬಾಳುವವು. ಅರಣ್ಯ ನಿರ್ವಹಣೆಗೆ ಕಾರ್ಯಯೋಜನೆ ಬರೆಯುವಾಗ ವೃಕ್ಷ ಜಾತಿಗಳ ವಿವರಣೆ ನೀಡಬೇಕಾಗುತ್ತದೆ. ಚೌಬೀನೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಸಂಕುಲಗಳನ್ನು ಸಾರಾಸಗಟಾಗಿ “ಜಂಗ್ಲಿ’ ಎಂದು ಬರೆಯುವುದು ಅಭ್ಯಾಸವಾ? ಸ್ವಾತಂತ್ರ್ಯಪೂರ್ವದಲ್ಲಿ  ನಾರ್ತ್‌ ಕೆನರಾ ( ಉತ್ತರ ಕನ್ನಡ) ಜಿಲ್ಲೆಯಲ್ಲಿ ಕ್ರಿ.ಶ. 1895-1937 ರ  ಸಮಯದಲ್ಲಿ ಬ್ರಿಟಿಷರು ಬರೆದ 42 ಅರಣ್ಯ ಕಾರ್ಯ ಯೋಜನೆಗಳಲ್ಲಿ ಸುಮಾರು 37 ಯೋಜನೆಗಳು ತೇಗ ಬೆಳೆಸಲು ಮೀಸಲಾಗಿದ್ದವು. ಇದರ ಪರಿಣಾಮ, ಸಸ್ಯ ಅಥವಾ ಅರಣ್ಯ ಪ್ರದೇಶ ಗುರುತಿಸುವಾಗ ‘Nಟn ಖಛಿಚk ‘ ಪದ ಇಲಾಖೆಯಲ್ಲಿ ಬಳಕೆಗೆ ಬಂದಿತು. ತೇಗ ವೃಕ್ಷ ಬಿಟ್ಟರೆ ಬೇರೆ ಮರಗಳಿಗೆ ಬೆಲೆ  ಇಲ್ಲವೆಂದು ಅಣಕಿಸಿದಂತೆ ನಾಡಿನ ನೆಲದಲ್ಲಿ ಅರಣ್ಯಾಡಳಿತ ನಡೆಯಿತು. ಡೆಹ್ರಾಡೂನ್‌ನಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಡೆದ  ತರಬೇತಿ ಪಡೆದು ಎದ್ದು ಬಂದ ಐಎಫ್ಎಸ್‌ ಅಧಿಕಾರಿಗಳೆಲ್ಲ ದೇವಲೋಕದ ಕಾಡಿನೂರಿಗೆ ದರ್ಪಧರಿಸಿ ಅವತರಿಸಿದರು. ಕಾಡು ಸುತ್ತಾಡದೇ ನಿವೃತ್ತರಾದವರೂ ಇದ್ದಾರೆ! ಇವರೆಲ್ಲ  ನೆಡುತೋಪಿನಲ್ಲಿ ಸಾಲು ಮರ ಬೆಳೆಸುವ ಶೂರರಾದರು.  ಸ್ವಾತಂತ್ರ್ಯದ ಬಳಿಕ ನೀಲಗಿರಿ, ಅಕೇಶಿಯಾ, ಗಾಳಿ ಸಸ್ಯ ಹಿಡಿದು ಕೈಗಾರಿಕಾ ನೆಡುತೋಪು ಬೆಳೆಸಿ ಕಾಗದ ಕಾರ್ಖಾನೆಗಳಿಗೆ ಆಹಾರ ಒದಗಿಸಿದರು. ನೆಡುತೋಪು ಬೆಳೆಸಿದ ನೆಲೆಯಲ್ಲಿ ನೂರಾರು ವರ್ಷಗಳಿಂದ ಅಡವಿ ಸಸ್ಯಗಳಲ್ಲಿ ಆಹಾರ ದರ್ಶನ ಮಾಡಿದ ತಾಯಂದಿರಿದ್ದಾರೆಂದು ಅರಣ್ಯ  ಆಡಳಿತ ಲೋಕಕ್ಕೆ ಅರ್ಥವಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪರಿಸರ ಪರಿಸರವೆಂದು ಮಾತಾಡುವವರಿಗೂ ನಗರ ತಜ್ಞರು ಮಾತ್ರವೇ ಮಹಾಜಾnನಿಗಳಾಗಿ ಕಾಣಿಸಿದರು. ಮಾತಾಡದ ಅಮ್ಮನ ಅರಿವು ಮೂಲೆಗೆ ಬಿತ್ತು.  

Advertisement

ಕಾಡು ತೋಟ ಬೆಳೆಸಲು ಹೊರಡುವವರು ಸಸ್ಯ ಗುಣಗಳ ಬಗ್ಗೆ ಊರ ಅಮ್ಮಂದಿರ ಜೊತೆ ಮೊದಲು ಮಾತಾಡಬೇಕು. ಆಗ ಸರಹದ್ದಿನ ಸಸ್ಯಗಳ ಸರಿಯಾದ ಪರಿಚಯವಾಗುತ್ತದೆ. ಬಳಸುವ ಜಾnನ ದೊರಕಿದಾಗ ಉಳಿಸುವ ಪ್ರೀತಿ ಕಾಣಿಸುತ್ತದೆ. ಒಮ್ಮೆ ರಾಜ್ಯದ ಖ್ಯಾತ ಪರಿಸರವಾದಿಯ ಪುತ್ರರೊಬ್ಬರು ಅಪ್ಪೆ ಮಿಡಿಗಳ ಸಂಶೋಧನೆಗೆಂದು ಶಿರಸಿಗೆ ಬಂದಿದ್ದರು. ಬೆಂಗಳೂರಿನ ನಿವಾಸಿಯಾದ ಅವರು ಯಾವುದೋ ವಿದೇಶಿ ನೆರವಿನಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ಅಪ್ಪೆತಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಚರ್ಚೆಗೆ  ಆಹ್ವಾನಿಸಿದರು. ಅಪ್ಪೆತಳಿಯ ವಿವರಗಳನ್ನು ಜಗತ್ತಿಗೆ ಮಾರುವ ಉತ್ಸಾಹ ಕಾಣಿಸುತ್ತಿತ್ತು. ರೈತರು ತಳಿ ಗಿಡಗಳನ್ನು ಒದಗಿಸಿದರೆ ಬೆಂಗಳೂರಿನಲ್ಲಿ ಇವುಗಳನ್ನು ಬೆಳೆಸುವುದಾಗಿ ವಿವರಿಸಿದರು. ‘ ಸರ್‌, ನಿಮಗೆ ಮಿಡಿ ಉಪ್ಪಿನಕಾಯಿ ಮಾಡೋದಕ್ಕೆ ಬರ್ತದಾ?’ ನೇರವಾಗಿ ಪ್ರಶ್ನಿಸಿದೆ. ‘ ಇಲ್ಲ, ನಾನು ತಳಿಯ ಬಗ್ಗೆ ಸಂಶೋಧನೆಗೆ ಬಂದಿದ್ದೇನೆ ‘ ಎಂದರು. ಮಲೆನಾಡಿನ ಅಮ್ಮಂದಿರು ಮಳೆಗಾಲಕ್ಕೆ ಮುನ್ನ ಮಿಡಿ ಉಪ್ಪಿನಕಾಯಿ ತಯಾರಿಸುತ್ತಾರೆ.  ಪ್ರತಿ ಮನೆಯವರೂ ಉಪ್ಪಿನಕಾಯಿಗೆ ಉತ್ತಮ ತಳಿಯಾವುದೆಂಬುದರ  ಬಳಕೆ ಅರಿತಿದ್ದಾರೆ. ಉಪ್ಪಿನಕಾಯಿ ತಯಾರಿಸಿ ಬಲ್ಲವರಿಗೆ ತಳಿ ಮರದ ಪ್ರೀತಿ ಇರುತ್ತದೆ. ಬಳಕೆಯ ಜಾnನಲ್ಲದೇ ತಳಿಯ ಕಥೆ ಬರೆದರೆ ಮುಂದೆ ಸಂರಕ್ಷಿಸಿದ ಮರದಲ್ಲಿ ಫ‌ಲ ಬಿಟ್ಟಾಗ ಅದು  ಕಾಡಿನ “ಹುಳಿಕಾಯಿ’ ಮಾತ್ರವಾಗಿ ಕಾಣಿಸುತ್ತದೆಂದು ವಿವರಿಸಿದೆ. 

ಕಾಡು ತೋಟದಲ್ಲಿ ಸಸ್ಯ ಬೆಳೆಸುವುದರ ಜೊತೆ ಜೊತೆಗೆ ಆಹಾರ ಪರಂಪರೆಯನ್ನು ನಾವು ಸರಿಯಾಗಿ ಅರಿಯುತ್ತ ಹೋಗುವುದು ಮುಖ್ಯ. ಅದಿಲ್ಲದಲ್ಲಿ ಮಲೆನಾಡಿನ ಅಕ್ಕರೆಯ ಅತ್ಯುತ್ತಮ ಅಪ್ಪೆ ಮಿಡಿ ಅಪರಿಚಿತ ನೆಲೆಗೆ ಹೋಗಿ ಕಾಡು ಮಾಯವಾಗಿ ಕಡೆಗಣನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ. ನಮ್ಮ ತೋಟದಲ್ಲಿ ಏನೆಲ್ಲ ಜಾತಿಗಳಿವೆಯೆಂದು ಹೇಳುವಾಗ ಬಳಸುವ ಕಲೆಯನ್ನು ಕಲಿತಾಗ ಮಾತಿನ ಮಹತ್ವ ಹೆಚ್ಚುತ್ತದೆ. ಇಂದಿನ ಅವಸರದ ದಿನಚರಿಯಲ್ಲಿ ಅಮ್ಮನ ಅಡುಗೆಯ ವಿವರ ಕೇಳಲು ಯಾರಿಗೂ ಬಿಡುವಿಲ್ಲ.  ಆದರೆ ನಮ್ಮ ಸುತ್ತಮುತ್ತ ಅಪಾರ ಅನುಭವವುಳ್ಳ ನೂರಾರು ಜನರಿದ್ದಾರೆ. ಇವರನ್ನು ಮಾತಾಡಿಸುವ ತುರ್ತು ಅಗತ್ಯವಿದೆ.  ಅಮ್ಮ ಹೇಳದ ನೂರೆಂಟು ಅಡುಗೆಗಳಲ್ಲಿ ಆಹಾರ ಲೋಕದ ಇನ್ನೆಂಥ ಅನಘರತ್ನಗಳಿವೆಯೋ ? 

ಅಮ್ಮಂದಿರ ಅರಿವಿನ ಮಹತ್ವ
ಸಸ್ಯಕ್ಕೆ ಸಸ್ಯಶಾಸ್ತ್ರೀಯ ಹೆಸರು ಹೇಳುವವರನ್ನು ತಜ್ಞರೆಂದು ನಾವು ಗುರುತಿಸುತ್ತೇವೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಲ್ಲಿ ಸಿಗುವ ಇವರು ಸಸ್ಯದ ಎಲೆ, ಹೂ, ಫ‌ಲ ನೋಡಿಕೊಂಡು ಗುಣ ವಿವರಿಸುತ್ತಾರೆ. 25 ವರ್ಷಗಳ ಹಿಂದೆ ಸಸ್ಯದ ಬಗ್ಗೆ ಲೇಖನ ಬರೆಯಲು ಹೊರಟಾಗ ನಮಗೆ ಸಸ್ಯದ ವೈಜಾnನಿಕ ಹೆಸರೇನು? ಎಂಬುದು ಮುಖ್ಯ ಪ್ರಶ್ನೆಯಾಗಿತ್ತು. ಸಸ್ಯ ಶಾಸ್ತ್ರೀಯ ಹೆಸರು ತಿಳಿದರೆ ಪುಸ್ತಕದ ಪುಟ ತೆಗೆದು ಜಗತ್ತಿನ ಇದರ ನೆಲೆ-ಬೆಲೆ ಅರಿಯಬಹುದೆಂದು ಹೇಳುತ್ತಿದ್ದರು. ಕಾಡು ಸುತ್ತಾಡುವಾಗ ಕಂಡ ಮೂಲಿಕೆಗಳ ಬಗ್ಗೆ ಸ್ಥಳೀಯ ವನವಾಸಿಗರು, ನಾಟಿ ವೈದ್ಯರು ಏನು ಹೇಳುತ್ತಾರೆಂಬುದಕ್ಕಿಂತ ಯಾವತ್ತೂ ಕಾಡಿಗೆ ಹೋಗದವರು ಪುಸ್ತಕ ನೋಡಿ ವಿವರಿಸುತ್ತಿದ್ದ ಮಾಹಿತಿ ಪಡೆಯಲು ಅಲೆಯುತ್ತಿದ್ದೆವು. ಕೊನೆ ಕೊನೆಗೆ ಸಸ್ಯ ಜಾnನ ಶಾಖೆ ಬಳಕೆ ಜಾnನದಲ್ಲಿದೆಯೋ? ಕುಕ್‌ ಪ್ಲೋರಾ ಅಧ್ಯಯನ ಮಾರ್ಗದಲ್ಲಿದೆಯೋ ಎನ್ನುವ ಅನುಮಾನಗಳೆದ್ದವು. “ಉತ್ತಮ ಮಾಹಿತಿಗಳು ಎಲ್ಲೆಡೆಯಿಂದ ಬರಲಿ’ ಎಂದು ನಾವು  ಜನಪದ, ವೈಜಾnನಿಕ(?) ವಿಷಯ ಕೆದಕುತ್ತ ಹೋದಾಗ ಅಮ್ಮ ಹೇಳಿದ ಅಡುಗೆಗಳು ಮಹತ್ವವೆನಿಸಿದವು. 

ಪರಿಕಲ್ಪನೆಯ ಪರಿಕ್ರಮಣ – ಕಾಡು ತೋಟ ರಾಜ್ಯ ನೋಟ

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next