ಹುಬ್ಬಳ್ಳಿ: ಈ ಹಿಂದೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಈ ಬಾರಿಯೂ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ (ಹಿರಿಯ ವಿಭಾಗ) ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎ.ಕೆ. ನಾಗರಾಜಪ್ಪ ಹೇಳಿದರು.
ನೂತನ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕ ಅದಾಲತ್‌ನಲ್ಲಿ 889 ಪ್ರಕರಣಗಳನ್ನು ಇತ್ಯರ್ಥಪಡಿಸಿ ರಾಜ್ಯದಲ್ಲಿ ಉತ್ತಮ ಕಾರ್ಯ ಎಂದು ಗುರುತಿಸಲಾಗಿದೆ. ಇದೇ ಮಾದರಿಯಲ್ಲಿ ಸೆ. 14 ರಂದು ನಡೆಯುವ ಅದಾಲತ್‌ನಲ್ಲಿ ಸುಮಾರು 1,000 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಿದ್ದು, ವಿವಿಧ ಇಲಾಖೆಗಳು, ವಕೀಲರ ಸಹಕಾರ ಅಗತ್ಯ ಎಂದರು.
ಚೆಕ್‌ಬೌನ್ಸ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಯುತ್ತಿದ್ದು, ಇವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ಪ್ರಕರಣದಲ್ಲಿ ನೋಟಿಸ್, ವಾರೆಂಟ್‌ಗಳು ತಲುಪುತ್ತಿಲ್ಲ. ಈ ಕುರಿತು ಪೊಲೀಸ್ ಇಲಾಖೆ ಒತ್ತು ನೀಡಬೇಕಾಗಿದೆ. ಬ್ಯಾಂಕ್‌ನ ಪ್ರಕರಣಗಳು ಬಗೆಹರಿಸಿಕೊಳ್ಳುತ್ತಿದ್ದಾರೆ. ಆದರೆ ಖಾಸಗಿ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿಯುತ್ತಿದ್ದು, ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು. ವಿಳಾಸದ ಸಮಸ್ಯೆಯಿಂದ ನೋಟಿಸ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಉತ್ತರಿಸಿದರು. ಈ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ಈ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಮಾತನಾಡಿ, ಪ್ರತಿಯೊಬ್ಬ ವಕೀಲರು ಕನಿಷ್ಠ ಎರಡು ಪ್ರಕರಣಗಳನ್ನು ಲೋಕ ಅದಾಲತ್‌ಗೆ ತರಬೇಕು. ರಾಜಿ ಸಂಧಾನದ ಮೂಲಕ ಪ್ರಕರಣದ ಇತ್ಯರ್ಥಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.
ನ್ಯಾ| ದೇವೇಂದ್ರಪ್ಪ ಬಿರಾದರ, ನ್ಯಾ| ಸುಮಂಗಲಾ ಬಸವಣ್ಣೂರು, ನ್ಯಾ| ಕೆ.ಎನ್. ಗಂಗಾಧರ, ನ್ಯಾ| ರವೀಂದ್ರ ಪಲ್ಲೇದ, ನ್ಯಾ| ಸಂಜಯ ಗುಡಗುಡಿ, ನ್ಯಾ| ಸುಜಾತಾ, ನ್ಯಾ| ಮಹೇಶ ಪಾಟೀಲ, ನ್ಯಾ| ವಿ.ಮಾದೇಶ, ನ್ಯಾ| ಆರ್.ಶಕುಂತಲಾ, ಣನ್ಯಾ| ದೀಪಾ ಮನೀರಕರ, ನ್ಯಾ| ದೀಪ್ತಿ ನಾಡಗೌಡ, ನ್ಯಾ| ಎಚ್.ಟಿ.ಅನುರಾಧ, ನ್ಯಾ| ವಿಶ್ವನಾಥ ಮುಗತಿ, ನ್ಯಾ| ಎಸ್.ಎಂ.ಚೌಗಲೆ, ನ್ಯಾ| ಪುಷ್ಪಾ ಜೋಗೋಜಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ ಇನ್ನಿತರರಿದ್ದರು.