Advertisement
ಪಂಜಿಕಲ್ಲು ಸಮೀಪದ ಮೂರೂರಲ್ಲಿ ಪಯಸ್ವಿನಿ ನದಿ ನೀರಿಲ್ಲದೆ ಬರಡಾಗಿದ್ದು, ಮೀನುಗಳು ಜೀವ ಬಿಡುತ್ತಿವೆ. ದಿನೇ ದಿನೇ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಬೇರೆ ಊರಿನ ಜನರು ಮೀನು ಹಿಡಿಯಲು ಬರುತ್ತಿದ್ದಾರೆ. ಮೀನು ಹಿಡಿಯುತ್ತಾ ಇದ್ದ ನೀರನ್ನು ಕೊಳಕು ಮಾಡುತ್ತಾರೆ. ಗುಂಡಿಯಲ್ಲಿದ್ದ ನೀರು ಕೊಳಚೆಯಾಗಿ ಉಪಯೋಗ ಶೂನ್ಯವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ನೀರಿಲ್ಲದೆ ಪರದಾಡುವ ಸ್ಥಳೀಯ ನಿವಾಸಿಗಳನ್ನು ಲೆಕ್ಕಿಸದೆ, ಪಕ್ಕದ ಗ್ರಾಮಸ್ಥರು ಮೀನು ಹಿಡಿಯಲು ಗುಂಪುಗಳಾಗಿ ಬರುತ್ತಾರೆ. ಮೀನು ಹಿಡಿಯುವುದರೊಂದಿಗೆ, ನೀರನ್ನು ಕೊಳಕು ಮಾಡಿ ಹೋಗುತ್ತಾರೆ. ಬೆಳಗ್ಗಿನ ಹೊತ್ತು ಬಂದರೆ ಸ್ಥಳೀಯರು ಬಿಡುವುದಿಲ್ಲ ಎಂದು ಮಧ್ಯರಾತ್ರಿ ಕಳೆದ ಮೇಲೆ ಬರುತ್ತಾರೆ. ಮೀನು ಹಿಡಿಯಬೇಡಿ, ನೀರು ಕೊಳಕಾಗುತ್ತವೆ ಎಂದು ಹೇಳಿದರೂ ಕೇಳುವುದಿಲ್ಲ ಅನ್ನುತ್ತಾರೆ ಸ್ಥಳೀಯರು. ರಾತ್ರಿಯಲ್ಲಿ 10ರಿಂದ 15 ಜನರ ಗುಂಪು ಬರುತ್ತದೆ. ಪ್ರಶ್ನಿಸಲು ಹೋದರೆ ಹೊಡೆಯಲು ಮುಂದಾಗುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಗ್ರಾ.ಪಂ. ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
Related Articles
Advertisement
ತೋಟಗಳಿಗೆ ಹಾಯಿಸಲು ನೀರಿಲ್ಲ. ಇರುವ ಅಲ್ಪ ಸ್ವಲ್ಪ ನೀರನ್ನು ಈ ಭಾಗದ ಜನರು ದಿನನಿತ್ಯದ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ನಳ್ಳಿ ನೀರು ಇದ್ದರೂ ಕೆಲವೊಮ್ಮೆ ಕೈಕೊಟ್ಟರೆ ನದಿ ನೀರು ಉಪಯೋಗಿಸುತ್ತೇವೆ. ಇದು ನಮಗೆ ಅಮೂಲ್ಯ. ಆದರೆ ಮೀನು ಹಿಡಿಯುವವರು ನೀರನ್ನು ಮಲಿನ ಮಾಡುತ್ತಾರೆ. ಜಲಚರಗಳೊಂದಿಗೆ ಗ್ರಾಮಸ್ಥರಿಗೂ ಕುತ್ತು ತರುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಅಳಲು.
ಇಷ್ಟು ಬತ್ತಿದ್ದು ಇದೇ ಮೊದಲುಬೇಸಗೆ ಕಾಲದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಕಡಿಮೆಯಾಗಿದ್ದರೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಜಲಚರಗಳು ನೀರಲ್ಲಿದ್ದಂತೆ, ತೋಟಗಳಿಗೂ ನೀರು ಹಾಕಲಾಗುತಿತ್ತು. ಮೊದಲ ಸಲ ಈ ರೀತಿಯಾಗಿದೆ. ನದಿಯ ನೀರನ್ನೇ ದನ ಕರುಗಳಿಗೂ ಕೊಡುತ್ತಿದ್ದು, ಈ ವರ್ಷ ತೋಟಗಳಿಗೆ ನೀರು ಹಾಯಿಸುವುದು ಒತ್ತಟ್ಟಿಗಿರಲಿ, ದನ-ಕರುಗಳಿಗೆ ಕುಡಿಯಲೂ ಸಾಲುತ್ತೋ ಎನ್ನುವ ಅನುಮಾನ. ನದಿಯಲ್ಲಿದ್ದ ಅಲ್ಪ ಸ್ವಲ್ಪ ನೀರನ್ನೂ ಮೀನು ಹಿಡುಯುವ ನೆಪದಲ್ಲಿ ಗಲೀಜು ಮಾಡುತ್ತಾರೆ. ಬಾವಿಯಲ್ಲೂ ನೀರಿಲ್ಲ, ಬೇಸಗೆಯಲ್ಲಿ ಜೀವಿಸುವುದೇ ಕಷ್ಟ ಎಂದು ಗ್ರಾಮಸ್ಥರು ಹೇಳುತ್ತಾರೆ. ಅಲೆಮಾರಿಗಳ ಕೆಲಸ
ಪಯಸ್ವಿನಿ ನದಿಯ ಈ ಭಾಗದಲ್ಲಿ ಮೀನು ಹಿಡಿದು ನೀರು ಮಲಿನವಾಗುವುದರ ಬಗ್ಗೆ ಮಾಹಿತಿ ಇದೆ. ಪಿರಿಯಾಪಟ್ಟಣ, ಹುಣಸೂರು ಭಾಗದಿಂದ ಅಲೆಮಾರಿ ಜನಾಂಗದವರು ಹೆಚ್ಚಾಗಿ ಬರುತ್ತಿದ್ದಾರೆ. ಎರಡು ತಿಂಗಳ ಹಿಂದೆ ಮೀನು ಹಿಡಿಯಲು ಬಂದವರಿಗೆ ನೋಟಿಸ್ ನೀಡಿ ಕಳುಹಿಸಲಾಗಿದೆ. ಅಲ್ಲಿನ ಜನರು ಕುಡಿಯಲು ನದಿ ನೀರನ್ನು ಬಳಸುತ್ತಿದ್ದಾರೆ. ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳುತ್ತೇವೆ.
-ಜಯಪ್ರಕಾಶ್ ಪಿಡಿಒ,
ಮಂಡೆಕೋಲು ಗ್ರಾ.ಪಂ.
ಇಂತಹ ಬರಗಾಲ ಕಂಡಿಲ್ಲ
ಕಳೆದ 38 ವರ್ಷಗಳಲ್ಲಿ ಇಂತಹ ಬರಗಾಲವನ್ನು ನಾನು ಕಂಡಿಲ್ಲ. ಪಯಸ್ವಿನಿ ನೀರಿಲ್ಲದೆ ಮೀನುಗಳು ಸಾಯುವುದರ ಜತೆಗೆ ಪಕ್ಕದ ಗ್ರಾಮದವರು ಮೀನು ಹಿಡಿಯಲು ಬರುತ್ತಾರೆ. ನೀರನ್ನು ಕೊಳಚೆ ಮಾಡುತ್ತಾರೆ, ಜಲಚರಗಳಿಗೆ ಸಂಕಟ ಎದುರಾಗಿದೆ. ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ನೀರಿಲ್ಲದೆ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ.
– ಮೊಹಮ್ಮದ್ ಕುಂಞಿ
ಸ್ಥಳೀಯರು, ಮೂರೂರು. – ಶಿವಪ್ರಸಾದ್ ಮಣಿಯೂರು