ಬೆಂಗಳೂರು: ರಾಜ್ಯದಲ್ಲಿ ಎಚ್1ಎನ್1 ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ದಿನೇ ದಿನೇ ಸೋಂಕು ಉಲ್ಬಣಿಸುತ್ತಲೇ ಇದೆ. ಅಕ್ಟೋಬರ್‌ನಲ್ಲಿ 750 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಸೋಂಕು ಪ್ರಕರಣಗಳ ಸಂಖ್ಯೆ 1,201ಕ್ಕೆ ಏರಿದ್ದು, 19 ಮಂದಿ ಸಾವಿಗೀಡಾಗಿರುವುದು ಆತಂಕ ಮೂಡಿಸಿದೆ.
ಸೆಪ್ಟೆಂಬರ್ ಆರಂಭದಿಂದ ರಾಜ್ಯದಲ್ಲಿ ಎಚ್1ಎನ್1 ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಜನವರಿಯಿಂದ ಆಗಸ್ಟ್‌ವರೆಗೂ ಕೇವಲ 38 ಮಂದಿಗೆ ಮಾತ್ರ ಇದರ ಸೋಂಕು ತಗುಲಿತ್ತು. ಆದರೆ, ಸೆಪ್ಟೆಂಬರ್ ತಿಂಗಳಿಂದೀಚೆಗೆ ಸೋಂಕು ಕಾಣಿಸಿಕೊಂಡವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದ್ದು, ಎಚ್1ಎನ್1 ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.ಪ್ರಸಕ್ತ ಸಾಲಿನಲ್ಲಿ 7,910 ಮಂದಿ ಶಂಕಿತರ ಗಂಟಲು ದ್ರಾವಣ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 1,201 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜತೆಗೆ, ನಗರ ಪ್ರದೇಶಗಳಲ್ಲಿಯೇ ಹೆಚ್ಚಿನವರಲ್ಲಿ ಸೋಂಕಿರುವುದು ಆಘಾತಕಾರಿ ವಿಚಾರವಾಗಿದೆ.
ಕರಾವಳಿ, ಮಲೆನಾಡಿನಲ್ಲಿ ಸೋಂಕು ಹೆಚ್ಚಳ: ಇತ್ತೀಚಿನ ಮಾಹಿತಿಯಂತೆ ಎಚ್1ಎನ್1 ಕರಾವಳಿ ಭಾಗದಲ್ಲಿ ಹೆಚ್ಚಿದ್ದು, ದಕ್ಷಿಣ ಕನ್ನಡದಲ್ಲಿ 83, ಉಡುಪಿಯಲ್ಲಿ 98 ಪ್ರಕರಣಗಳು ಕಂಡು ಬಂದಿವೆ. ಈಗಾಗಲೇ ಸೋಂಕಿಗೆ ಎರಡು ಜಿಲ್ಲೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಅಂತೆಯೇ, ಮಲೆನಾಡಿನಲ್ಲೂ ಸೋಂಕಿತರು ಹೆಚ್ಚಾಗಿದ್ದು, ಶಿವಮೊಗ್ಗದಲ್ಲಿ 105, ಚಿಕ್ಕಮಗಳೂರು ಜಿಲ್ಲೆಯಲ್ಲಿ 50 ಪ್ರಕರಣಗಳು ಪತ್ತೆಯಾಗಿವೆ. ಎಚ್1ಎನ್1 ಗಾಳಿಯಲ್ಲಿ ಹರಡುವ ಸೋಂಕಾಗಿರುವುದರಿಂದ ಹೊರಭಾಗದಿಂದ ಬಂದು ಹೋಗುವವರು ಈ ಭಾಗಗಳಲ್ಲಿ ಹೆಚ್ಚಿದ್ದಾರೆ. ಹೀಗಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ವಾದ.
ಖಾಸಗಿ ಆಸ್ಪತ್ರೆಗಳಿಂದ ಸುಲಿಗೆ : ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳ ಕೆಲವು ಖಾಸಗಿ ಆಸ್ಪತ್ರೆಗಳು ಎಚ್1ಎನ್1 ರೋಗಿಗಳ ಚಿಕಿತ್ಸೆ ನೆಪದಲ್ಲಿ ಸಾರ್ವಜನಿಕರ ಸುಲಿಗೆಗೆ ಇಳಿದಿವೆ. ಆರೋಗ್ಯ ಇಲಾಖೆ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆಯಂತೆ ಖಾಸಗಿ ಆಸ್ಪತ್ರೆಗಳು ಸೋಂಕು ಪರೀಕ್ಷೆಗೆ 2,500 ರೂ.ಹಾಗೂ ಔಷಧಿಗೆ 200 ರೂ. ಪಡೆಯಬೇಕು. ಆದರೆ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆ ಪರೀಕ್ಷೆ, ಔಷಧ, ರೋಗ ನಿಯಂತ್ರಕ ಕೊಠಡಿ, ವೆಂಟಿಲೇಟರ್, ವಿಶೇಷ ಸಿಬ್ಬಂದಿ ಹೀಗೆ ಲಕ್ಷಾಂತರ ರೂ.ಸುಲಿಗೆ ಮಾಡುತ್ತಿದ್ದಾರೆಂಬ ಆರೋಪಗಳಿವೆ. ಇನ್ನು ನೇರವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋದರೆ ಸರ್ಕಾರದ ಆರೋಗ್ಯ ಕರ್ನಾಟಕ ಕಾರ್ಡ್ ಉಪಯೋಗವಾಗುವುದಿಲ್ಲ. ಇದರಿಂದ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ: ರೋಗಿಗಳಲ್ಲಿ ಅಧಿಕ ಜ್ವರ, ಗಂಟಲು ನೋವು, ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೂಡಲೇ ಗಂಟಲು ದ್ರಾವಣವನ್ನು ಮಾದರಿ ಪರೀಕ್ಷೆಗೆ ಒಳಪಡಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್1ಎನ್1 ಚಿಕಿತ್ಸೆ ಹಾಗೂ ಎಲ್ಲ ರೀತಿಯ ಔಷಧೋಪಚಾರಗಳು ಉಚಿತವಾಗಿದ್ದು, ಸೋಂಕು ಕಂಡು ಬಂದ ರೋಗಿಗಳನ್ನು ಎ, ಬಿ, ಸಿ ಎಂದು ಮೂರು ರೀತಿಯಲ್ಲಿ ವಿಭಾಗಿಸಲಾಗುತ್ತದೆ. ಎ ಮಾದರಿಯಲ್ಲಿ ಕೇವಲ ಎಚ್1ಎನ್1 ಸೋಂಕಿತರಿದ್ದರೆ, ಬಿ ಮತ್ತು ಸಿಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ರಕ್ತದೊತ್ತಡ, ಮಧುಮೇಹ, ಹೃದ್ರೋಗಿಗಳು ಸೇರಿದಂತೆ ಗರ್ಭಿಣಿಯರಿರುತ್ತಾರೆ.
ಕೆಲ ಜಿಲ್ಲೆ-ತಾಲೂಕುಗಳಲ್ಲಿ ಎಚ್1ಎನ್1ಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಿದ್ದಾರೆ. ಕಾರಣ, ರೋಗ ಪತ್ತೆ ವಿಳಂಬವಾಗುವುದರಿಂದ ಒಂದೊಮ್ಮೆ ರೋಗಿ ಸಾವಿಗೀಡಾದರೆ ಅದರ ಹೊಣೆಯನ್ನು ಆಸ್ಪತ್ರೆ ಹೊರಬೇಕೆಂಬ ಭಯದಿಂದ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.
ಸೋಂಕಿನ ಲಕ್ಷಣಗಳು
ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರದ ಜತೆಗೆ ಉಸಿರಾಟದ ತೊಂದರೆ, ತೀವ್ರ ಮೈ-ಕೈ ನೋವು ಕಾಣಿಸಿಕೊಳ್ಳುವುದು, ವಾಂತಿ, ಅತಿಸಾರ, ವಾಕರಿಕೆ ಮತ್ತು ಬಾಯಿ ಅಥವಾ ಗಂಟಲಿನಲ್ಲಿ ಗುಳ್ಳೆಗಳು ಏಳುತ್ತವೆ.
ಜಿಲ್ಲೆಗಳು – ದೃಢಪಟ್ಟಿರುವ ರೋಗಿಗಳ ಸಂಖ್ಯೆ – ಸಾವಿಗೀಡಾಗಿರುವ ರೋಗಿಗಳು
ಬೆಂಗಳೂರು 342 – 4
ಶಿವಮೊಗ್ಗ 105 – 0
ದಕ್ಷಿಣ ಕನ್ನಡ 83 – 3
ಉಡುಪಿ 98 – 0
ದಾವಣಗೆರೆ 51 – 1
ಹಾಸನ 52 – 3
ಚಿಕ್ಕಮಗಳೂರು 50 – 0
ಬಳ್ಳಾರಿ 40 – 1
ವಿಜಯಪುರ 33 – 0
ಬೆಳಗಾವಿ 33 – 0
ಮೈಸೂರು 27 – 0
ಧಾರವಾಡ 26 – 0
ತುಮಕೂರು 16 – 3
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಉಚಿತ ಸೌಲಭ್ಯವಿದ್ದು, ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಿಯಾಗಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.
– ಡಾ.ಶಿವರಾಜ್ ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕರು. ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ
– ಜಯಪ್ರಕಾಶ್ ಬಿರಾದಾರ್