Advertisement

“ಸಾವಿರ ವೃಕ್ಷ’ಅಭಿಯಾನಕ್ಕೆ ಸಾಲುಮರದ ತಿಮ್ಮಕ್ಕ ಚಾಲನೆ

11:24 PM Sep 16, 2019 | Sriram |

ಉಡುಪಿ: ಉಡುಪಿ ಯಲ್ಲಿ ಸೋಮವಾರ ಯುವಕರು, ಹಿರಿಯರು, ಕಿರಿಯರು, ವಿದ್ಯಾರ್ಥಿಗಳಿಗೆ ವಿಶಿಷ್ಟ ರೀತಿಯ ಸಂಭ್ರಮ. ಇದಕ್ಕೆ ಕಾರಣರಾದವರು ಶತಾಯುಷಿ ಸಾಲು ಮರದ ತಿಮ್ಮಕ್ಕ. ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಲಿ. ಆಯೋಜಿಸಿದ್ದ “ಶತಮಾನ ಕಂಡ ಸಂಸ್ಥೆಯೊಂದಿಗೆ ಶತಾಯುಷಿ ತಿಮ್ಮಕ್ಕ’ ಕಾರ್ಯಕ್ರಮದಲ್ಲಿ ತಿಮ್ಮಕ್ಕ ಅವರು ಸಾವಿರ ವೃಕ್ಷ ಬೆಳೆಸುವ ಅಭಿಯಾನಕ್ಕೆ ಚಾಲನೆ ನೀಡಿ ಉಡುಪಿ ಜನರೊಂದಿಗೆ ಕೆಲವು ಹೊತ್ತು ಕಳೆದರು.

Advertisement

ಕ್ರಿಶ್ಚಿಯನ್‌ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸಾಲುಮರದ ತಿಮ್ಮಕ್ಕ ಅವರಿಂದ ಸಸಿಗಳನ್ನು ಸ್ವೀಕರಿಸಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಖುಷಿಪಟ್ಟರು. ಉಡುಪಿಯ ಅನೇಕ ಮಂದಿ ಹಿರಿಯ ನಾಗರಿಕರು, ಯುವಕರು ತಿಮ್ಮಕ್ಕ ಅವರಿಂದ ಗಿಡ ಪಡೆಯಲು ಮುಗಿಬಿದ್ದರು. ಎಲ್ಲರಿಗೂ ಲವಲವಿಕೆಯಿಂದಲೇ ಗಿಡ ವಿತರಿಸಿದ ತಿಮ್ಮಕ್ಕ ಸಸಿಗಳನ್ನು ಮಕ್ಕಳಂತೆ ಪೋಷಿಸುವಂತೆ ಸಲಹೆ ನೀಡಿದರು.

ವಿಕೋಪ ಎಚ್ಚರಿಕೆ ಇರಲಿ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ಎಡಿಸಿ ಬಿ. ಸದಾಶಿವ ಪ್ರಭು ಅವರು ಮಾತನಾಡಿ “ಪ್ರಾಕೃತಿಕ ಅಸಮತೋಲನ, ದುರಂತಗಳು ನಡೆಯುತ್ತಲೇ ಇವೆ. ಜನರು ಈ ಬಗ್ಗೆ ಹೆಚ್ಚು ಜಾಗೃತರಾಗಬೇಕು. ಪರಿಸರವನ್ನು ಉಳಿಸಲು ಎಚ್ಚೆತ್ತುಕೊಳ್ಳಬೇಕು. ಇಂಥ ಕೆಲಸಗಳು ಕೇವಲ ಸರಕಾರ ಗಳಿಂದ ಮಾತ್ರವೇ ಸಾಧ್ಯವಾಗದು. ಇದಕ್ಕೆ ನಾಗರಿಕರೂ ಕೂಡ ಕೈ ಜೋಡಿಸಬೇಕು. ಆಗ ಮಾತ್ರವೇ ಮುಂದೆ ನಡೆಯಬಹುದಾದ ಪ್ರಾಕೃತಿಕ ದುರಂತಗಳನ್ನು ತಪ್ಪಿಸಬಹುದಾಗಿದೆ’ ಎಂದು ಹೇಳಿದರು.

ತಿಮ್ಮಕ್ಕ ಅವರನ್ನು ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ವತಿಯಿಂದ ಸಮ್ಮಾನಿಸಿ 25,000 ರೂ. ನಗದು ನೀಡಿ ಪುರಸ್ಕರಿಸಲಾಯಿತು. ಪೊಲೀಸ್‌ ವೃತ್ತ ನಿರೀಕ್ಷಕ ಮಂಜುನಾಥ್‌ ಅವರು ಇಲಾಖೆಯ ವತಿಯಿಂದ ಸಮ್ಮಾನಿಸಿದರು. ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌, ಉಪಾಧ್ಯಕ್ಷ ಎಲ್‌.ಉಮಾನಾಥ್‌, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ ಉಪಸ್ಥಿತರಿದ್ದರು. ಅವಿನಾಶ್‌ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ, ಪ್ರಾಚ್ಯ ಸಂಶೋಧಕ ಎಸ್‌.ಎ. ಕೃಷ್ಣಯ್ಯ ಅವರು ಮರಗಳ ಮಹತ್ವವನ್ನು ವಿವರಿಸಿದರು.

ದೀಪ ಬೆಳಗಿ
ಗಮನ ಸೆಳೆದ ತಿಮ್ಮಕ್ಕ
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವಾಗ ಆರತಿ, ಪ್ರಾರ್ಥನೆ ಮಾಡುವ ಮೂಲಕ ತಿಮ್ಮಕ್ಕ ಗಮನ ಸೆಳೆದರು. ಇದು ಅಲ್ಲಿ ಒಂದು ಕ್ಷಣ ಮೌನ ವಾತಾವರಣ ನಿರ್ಮಿಸಿತು. ಸೊಸೈಟಿ ಕಚೇರಿಯೊಳಗೆ ತೆರಳಿದ ತಿಮ್ಮಕ್ಕ ಅವರಿಗೆ “ಸೊಸೈಟಿಗೆ 100 ವರ್ಷಗಳಾಗಿವೆ’ ಎಂದು ಸೊಸೈಟಿಯವರು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ತಿಮ್ಮಕ್ಕ “ಅದು ನನಗಿಂತ ಚಿಕ್ಕದು. ನನಗೆ 108 ಆಯಿತು’ ಎಂದರು !.

Advertisement

ಎಲ್ಲ ವಾರ್ಡ್‌ಗಳಲ್ಲಿ
ಗಿಡ ನೆಡಲಾಗುವುದು
“ಉಡುಪಿಯ ಈ ಹಿಂದಿನ ಜಿಲ್ಲಾಧಿಕಾರಿಯವರ ಸೂಚನೆಯಂತೆ ಈ ವರ್ಷ ನಗರಸಭೆ ಎಲ್ಲ ವಾರ್ಡ್‌ಗಳಲ್ಲಿ ಗಿಡ ನೆಡುವ ಸಾಂಕೇತಿಕ ಕಾರ್ಯಕ್ರಮ ನಡೆಸಲಾಗಿದೆ. ಮುಂದಿನ ವರ್ಷ ಎಲ್ಲ ವಾರ್ಡ್‌ಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆ ವತಿಯಿಂದ ಅರಣ್ಯ ಇಲಾಖೆಯ ಸಹಕಾರದಲ್ಲಿ ಗಿಡಮರಗಳನ್ನು ಬೆಳೆಸಲಾಗುವುದು’ ಎಂದು ನಗರಸಭೆ ಆಯುಕ್ತ ಆನಂದ ಸಿ.ಕಲ್ಲೋಳಿಕರ್‌ ತಿಳಿಸಿದರು.

ತಿಮ್ಮಕ್ಕನಂಥವರು ಹುಟ್ಟಿಲ್ಲ
ತಿಮ್ಮಕ್ಕನವರೊಂದಿಗೆ 18 ವರ್ಷಗಳಿಂದ ರಾಜ್ಯ, ದೇಶದ ಮೂಲೆ ಮೂಲೆಗಳಿಗೆ ಸುತ್ತುತ್ತಿದ್ದೇನೆ. ತಿಮ್ಮಕ್ಕನವರಂಥ ಪ್ರತಿಫ‌ಲಾಪೇಕ್ಷೆ ರಹಿತ, ನಿಷ್ಕಲ್ಮಶ ಮನಸ್ಸು ಇರುವವರು ಈ ಭೂಮಿಯಲ್ಲಿಲ್ಲ. ಅವರಂಥವರು ಮತ್ತೆ ಹುಟ್ಟಿ ಬರಲು ಶತಮಾನಗಳೇ ಬೇಕಾಗಬಹುದು. ತಿಮ್ಮಕ್ಕನವರ ಪ್ರೇರಣೆಯಿಂದ ಪ್ರತಿಯೋರ್ವರು ವರ್ಷಕ್ಕೆ ಕನಿಷ್ಠ 10 ಗಿಡಗಳನ್ನಾದರೂ ಬೆಳೆಸಬೇಕು. ಪ್ಲಾಸ್ಟಿಕ್‌ ತ್ಯಜಿಸಬೇಕು.
– ಉಮೇಶ್‌,ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ

Advertisement

Udayavani is now on Telegram. Click here to join our channel and stay updated with the latest news.

Next